ಸಿದ್ದಾಪುರ, ಜೂ. ೨೧: ಕಾಡಾನೆ ಉಪಟಳದಿಂದ ಕಂಗೆಟ್ಟಿದ್ದ ನೆಲ್ಲಿಹುದಿಕೇರಿ, ಸಿದ್ದಾಪುರ ವ್ಯಾಪ್ತಿಯಲ್ಲಿ ಇದೀಗ ಹುಲಿ ಘರ್ಜನೆಗೆ ಭಯಪಡುವಂತಾಗಿದೆ. ತಾ. ೨೧ ರ ರಾತ್ರಿ ೮.೩೦ ರ ಸುಮಾರಿಗೆ ನೆಲ್ಲಿಹುದಿಕೇರಿಯ ಸೇತುವೆ ಬಳಿ ಹುಲಿಯೊಂದು ಕಂಡುಬAದಿದ್ದು, ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ನೆಲ್ಲಿಹುದಿಕೇರಿ ಹಳೆ ಸೇತುವೆ ಕೆಳ ಭಾಗದಲ್ಲಿರುವ ಜನವಸತಿ ಪ್ರದೇಶದಲ್ಲಿ ವ್ಯಾಘ್ರ ಸ್ಥಳೀಯರಾದ ಕಬೀರ್ ಎಂಬವರಿಗೆ ಕಣ್ಣಿಗೆ ಬಿದ್ದಿದೆ. ದಕ್ಷಿಣ ಕೊಡಗಿನಲ್ಲಿ ನಿರಂತರ ಹುಲಿ ದಾಳಿ ಪ್ರಕರಣಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ನೆಲ್ಲಿಹುದಿಕೇರಿಯಲ್ಲಿ ಹುಲಿ ಸಂಚರಿಸಿರುವುದು ಭಯ ಸೃಷ್ಟಿಸಿದೆ.

ಹುಲಿ ಸಂಚಾರ ಕಂಡು ಬಂದ ಹಿನ್ನೆಲೆ ಗ್ರಾಮಸ್ಥರು ಎಚ್ಚರವಹಿಸಬೇಕೆಂದು ಗ್ರಾ.ಪಂ. ಅಧ್ಯಕ್ಷ ಸಾಬು ವರ್ಗೀಸ್ ಮನವಿ ಮಾಡಿದ್ದಾರೆ. - ವಾಸು