ಸೋಮವಾರಪೇಟೆ, ಜೂ. ೨೧: ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಕುಟುಂಬದ ಆಧಾರ ಸ್ತಂಭ ಇದೀಗ ಹಾಸಿಗೆ ಹಿಡಿದಿದ್ದು, ಪುಟ್ಟ ಮಕ್ಕಳ ಸಹಿತ ಪತ್ನಿ ಕಣ್ಣೀರಿನಲ್ಲಿ ದಿನದೂಡುತ್ತಿದ್ದಾರೆ. ಮನೆಯಲ್ಲಿ ಊಟ, ಆಸ್ಪತ್ರೆಯಲ್ಲಿನ ಚಿಕಿತ್ಸೆಗೆ ಕೈಯಲ್ಲಿ ಬಿಡಿಗಾಸೂ ಇಲ್ಲದೇ ಸಂಕಷ್ಟದ ಸ್ಥಿತಿಯಲ್ಲಿ ಈ ಕುಟುಂಬ ಮರುಗುತ್ತಿದೆ.
ಪಟ್ಟಣದಲ್ಲಿ ಆಟೋ ಓಡಿಸಿಕೊಂಡು, ಕೂಲಿ ಕೆಲಸ ಮಾಡಿಕೊಂಡು ತೋಟದ ಲೈನ್‌ಮನೆಯಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಪ್ರಕಾಶ ಅವರು ಇದೀಗ ಆಸ್ಪತ್ರೆಯ ಹಾಸಿಗೆ ಹಿಡಿದಿದ್ದು, ಅತ್ತಿತ್ತ ಅಲುಗಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.
ನೇರುಗಳ್ಳೆ ಗ್ರಾಮದ ಲೈನ್‌ಮನೆಯಲ್ಲಿ ಪತ್ನಿ ಹಾಗೂ ಮೂವರು ಹೆಣ್ಣುಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದ ಪ್ರಕಾಶ್ ಅವರು, ಕಳೆದ ಏಪ್ರಿಲ್ ೭ ರಂದು ಕಕ್ಕೆಹೊಳೆ ಸಮೀಪದ ಚಂದ್ರ ಎಂಬವರ ಮನೆಯ ಹಿಂಭಾಗವಿದ್ದ ಮರವನ್ನು ಕೊಯ್ಯುವ ಸಂದರ್ಭ, ಆಕಸ್ಮಿಕವಾಗಿ ಮರ ಪ್ರಕಾಶ್ ಅವರ ಮೇಲೆ ಬಿದ್ದಿದೆ.
ಪರಿಣಾಮ ಪ್ರಕಾಶ್ ಅವರ ಸೊಂಟ, ಬೆನ್ನು ಹಾಗೂ ಕಾಲುಗಳಿಗೆ ಪೆಟ್ಟಾಗಿದ್ದು, ಜೀವನ್ಮರಣ ಸ್ಥಿತಿಯಲ್ಲಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ನಂತರ ಹಾಸನದ ಆಸ್ಪತ್ರೆ, ಅಲ್ಲಿಂದ ಮಂಗಳೂರಿನ ವೆನ್ಲಾಕ್ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಶಸ್ತçಚಿಕಿತ್ಸೆಗೆ ಒಳಪಟ್ಟಿದ್ದು, ಇದೀಗ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದ್ದ ಆಟೋವನ್ನೂ ಸಹ ಮಾರಾಟ ಮಾಡಿ ಚಿಕಿತ್ಸೆಗೆ ಹಣ ಹೊಂದಿಸಿಕೊAಡಿದ್ದ ಪ್ರಕಾಶ್ ಅವರು, ಇದೀಗ ಎದ್ದು ಕೂರಲೂ ಸಹ ಆಗದ ಸ್ಥಿತಿಯಲ್ಲಿದ್ದಾರೆ. ಇವರ ಮೊದಲನೇ ಪುತ್ರಿ ೬ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎರಡನೇ ಮಗಳು ಅಂಗನವಾಡಿಗೆ ತೆರಳುತ್ತಿದ್ದಾಳೆ. ೧೦ ತಿಂಗಳ ಹಸುಗೂಸಿನೊಂದಿಗೆ ಪತ್ನಿ ಗಂಡನ ಆರೈಕೆಯಲ್ಲಿದ್ದು, ಊಟ ತಿಂಡಿಗೂ ಪರದಾಡುವಂತಾಗಿದೆ.
ಪ್ರಕಾಶ್ ಅವರ ಬೆನ್ನು, ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿರುವ ಹಿನ್ನೆಲೆ ಅತ್ತಿಂದಿತ್ತ ಅಲುಗಾಡಲೂ ಸಾಧ್ಯವಾಗುತ್ತಿಲ್ಲ. ಚಿಕಿತ್ಸೆ, ಔಷಧಿ ಖರೀದಿಗೆ ಬಿಡಿಗಾಸೂ ಇಲ್ಲ. ಚೆನ್ನಾಗಿ ಓಡಾಡಿಕೊಂಡಿದ್ದ ಸಂದರ್ಭ ಹತ್ತಾರು ಮಂದಿಯ ಸಂಕಷ್ಟಕ್ಕೆ ನೆರವಾಗುತ್ತಿದ್ದ ಪ್ರಕಾಶ್ ಅವರಿಗೆ ಇದೀಗ ಸಂಕಷ್ಟ ಎದುರಾಗಿದ್ದು, ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಮಲ್ಲಳ್ಳಿ ಜಲಪಾತ, ಕೆರೆ, ಬಾವಿಗೆ ಬಿದ್ದ ಹಲವಷ್ಟು ಶವಗಳನ್ನು ಮೇಲೆತ್ತುವಲ್ಲಿ ಪ್ರಕಾಶ್ ಅವರು ನೆರವಿಗೆ ಧಾವಿಸುತ್ತಿದ್ದರು. ಇದೀಗ ಅವರೇ ಹಾಸಿಗೆ ಹಿಡಿದಿದ್ದು, ಕುಟುಂಬವು ದಯನೀಯ ಸ್ಥಿತಿಗೆ ತಲುಪಿದೆ. ಕೂಲಿ ಕೆಲಸ ಮಾಡಿಕೊಂಡು ಪತ್ನಿಯೊಂದಿಗೆ ಮೂವರು ಹೆಣ್ಣುಮಕ್ಕಳನ್ನು ಸಲಹುತ್ತಿದ್ದ ಕುಟುಂಬದ ಆಧಾರ ಸ್ತಂಭ ಇದೀಗ ಹಾಸಿಗೆ ಹಿಡಿದಿದೆ. ಮಕ್ಕಳ ವಿದ್ಯಾಭ್ಯಾಸ, ಊಟೋಪಚಾರ, ಕುಟುಂಬ ನಿರ್ವಹಣೆ, ಆಸ್ಪತ್ರೆಯ ಔಷಧಿ ಖರ್ಚುಗಳಿಗೆ ಹಣವಿಲ್ಲದಂತಾಗಿದೆ. ಇಂತಹ ಸಂಕಷ್ಟದ ಸನ್ನಿವೇಶ ಎದುರಿಸುತ್ತಿರುವ ಪ್ರಕಾಶ್ ಅವರ ಕುಟುಂಬವು ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ.
ಇವರ ಕುಟುಂಬಕ್ಕೆ ನೆರವು ನೀಡಲು ಇಚ್ಚಿಸುವ ಸಹೃದಯ ದಾನಿಗಳು ಸೋಮವಾರಪೇಟೆಯ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿರುವ ಹೆಚ್.ಓ. ಪ್ರಕಾಶ್, ಖಾತೆ ಸಂಖ್ಯೆ ೬೪೧೭೦೧೦೦೦೦೦೬೦೩ (ಐಎಫ್‌ಎಸ್‌ಸಿ: ಬಿಎಆರ್‌ಬಿ೦ವಿಜೆಎನ್‌ಎಜಿಆರ್) ಇಲ್ಲಿಗೆ ನೆರವು ನೀಡಬಹುದಾಗಿದೆ.