ಸೋಮವಾರಪೇಟೆ, ಜೂ.೨೦: ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕ್ರೀಡಾಕೂಟಗಳಿಗೆ ಹೆಚ್ಚಿನ ಸಹಕಾರ ನೀಡಬೇಕಾದ ಅಗತ್ಯತೆ ಇದೆ. ಕ್ರೀಡಾಕೂಟಗಳಿಂದ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗಲಿದೆ ಎಂದು ಒಕ್ಕಲಿಗರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಅಭಿಪ್ರಾಯಿಸಿದರು.

ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘ ಮತ್ತು ಕೆವಿಬಿ ಫ್ರೆಂಡ್ಸ್ ಆಶ್ರಯದಲ್ಲಿ ದಾನಿ ರವೀಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾಕೂಟಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸುಸ್ಥಿತಿಗೆ ಸಹಕಾರಿಯಾಗಿವೆೆ. ಇದರೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಲೂ ಸಹ ಉತ್ತಮ ವೇದಿಕೆಯಾಗಿದೆ ಎಂದು ರವೀಂದ್ರ ಹೇಳಿದರು.

ಕ್ರೀಡಾಕ್ಷೇತ್ರಕ್ಕೆ ಸರ್ಕಾರದಿಂದಲೂ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ನೆಲದ ಕ್ರೀಡೆಯಾಗಿರುವ ಕಬಡ್ಡಿಯನ್ನು ಉಳಿಸುವತ್ತ ಚಿಂತನೆ ಹರಿಸಬೇಕಿದೆ. ಇಂದು ಗ್ರಾಮೀಣ ಕ್ರೀಡೆಗಳು ಅವನತಿಯ ಹಾದಿ ಹಿಡಿದಿದ್ದು, ಅವುಗಳನ್ನು ಮತ್ತೆ ಮುನ್ನೆಲೆಗೆ ತರಬೇಕಾದ ಅನಿವಾರ್ಯತೆ ಇದೆ ಎಂದರು.

ಕ್ರೀಡೆಗಳು ಪರಸ್ಪರ ಸಾಮರಸ್ಯ ವೃದ್ಧಿಸಲು ಸಹಕಾರಿಯಾಗಿವೆ. ಸ್ಪರ್ಧಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡಾಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದ್ದು, ವಿದ್ಯಾರ್ಥಿಗಳು ಪಾಠದೊಂದಿಗೆ ಕ್ರೀಡೆಯತ್ತಲೂ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ಇದಕ್ಕೂ ಮುನ್ನ ಇಲ್ಲಿನ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಮೋಟಾರ್ ಯೂನಿಯನ್ ಅಧ್ಯಕ್ಷ ಕೆ.ಜಿ. ಸುರೇಶ್, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಹೆಚ್.ಕೆ. ಗಂಗಾಧರ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಎನ್. ದೀಪಕ್, ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಇಂದಿರಾಗಾAಧಿ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಹೆಚ್.ಬಿ. ರಾಜಪ್ಪ, ಕೆ.ವಿ.ಬಿ. ಫ್ರೆಂಡ್ಸ್ ಅಧ್ಯಕ್ಷ ಎಸ್.ಆರ್. ಸುಮಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ೧೯ ವಯೋಮಾನದೊಳಗಿನ ಕಬಡ್ಡಿ ಪಂದ್ಯಾವಳಿಯಲ್ಲಿ ಹೊರಜಿಲ್ಲೆಗಳಿಂದ ೩೦ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು. ಸಂಜೆ ಜೇಸೀ ವೇದಿಕೆ ಮುಂಭಾಗವಿರುವ ಅಟಲ್‌ಜೀ ಕನ್ನಡ ಭವನದಲ್ಲಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ನಡೆಯಿತು.