ಮಡಿಕೇರಿ, ಜೂ. ೨೦: ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಪ್ರತಿಯೊಬ್ಬರು ಮಡಿಕೇರಿ, ಜೂ. ೨೦: ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಪ್ರತಿಯೊಬ್ಬರು ಗೆಲುವಿಗೆ ಕಟಿಬದ್ಧರಾಗಿ ದುಡಿಯಬೇಕು. ಗ್ರಾಮೀಣ ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಆದ್ಯತೆ ನೀಡುವಂತೆ ಕಾಂಗ್ರೆಸ್ ನಾಯಕರುಗಳು ಕಾರ್ಯಕರ್ತರಿಗೆ ಕರೆ ನೀಡಿದರು.

ನಗರದ ಕೊಡವ ಸಮಾಜ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ನವಸಂಕಲ್ಪ ಚಿಂತನ ಶಿಬಿರ ನಡೆಯಿತು.

ಗೆಲುವಿಗೆ ಶ್ರಮಿಸಿ - ಧ್ರುವನಾರಾಯಣ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಸ್ಥಾನಗಳನ್ನು ಗೆಲ್ಲಲು ಪ್ರತಿಯೊಬ್ಬರು ಶ್ರಮಿಸಬೇಕು.

(ಮೊದಲ ಪುಟದಿಂದ) ಹೆಚ್ಚು ಸದಸ್ಯತ್ವ ನೋಂದಣಿ ಮಾಡಿರುವವರನ್ನು ಬೂತ್ ಮಟ್ಟದ ಅಧ್ಯಕ್ಷರನ್ನಾಗಿ ಮಾಡಬೇಕು. ಬೂತ್ ಸಮಿತಿಗಳು ಪಕ್ಷದ ಸಂಘಟನೆಯಲ್ಲಿ ಮಹತ್ತರ ಪಾತ್ರ ವಹಿಸಿವೆ. ಈ ಹಿನ್ನೆಲೆ ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಕಟ್ಟಲು ಮುಂದಾಗಬೇಕು. ಕೇಂದ್ರ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿದ ಅವರು, ಬೆಲೆ ಏರಿಕೆ ಮೂಲಕ ಸಾಮಾನ್ಯ ಜನರ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಷ್ಟು ಕೆಳಮಟ್ಟದ ರಾಜಕಾರಣವನ್ನು ಯಾವ ಪಕ್ಷವೂ ಮಾಡಿರಲಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ೨ ಕೋಟಿ ಉದ್ಯೋಗ ಕಲ್ಪಿಸುತ್ತೇವೆ ಎಂದಿದ್ದ ಪ್ರಧಾನಿ ಮೋದಿ ಇಂದು ಜನ ವಿರೋಧಿ ನೀತಿಗಳಿಂದಾಗಿ ಇರುವ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಗಿದೆ. ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿರುವುದು ಕೇಂದ್ರದ ವಿರುದ್ಧ ಸೃಷ್ಟಿಯಾಗಿರುವ ಆಕ್ರೋಶವನ್ನು ಅನಾವರಣ ಮಾಡಿದೆ ಎಂದು ಹೇಳಿದರು.

ದೌರ್ಬಲ್ಯ ಮುಚ್ಚಿ ಹಾಕಲು ಧರ್ಮ ಸಂಘರ್ಷ - ವಿನಯ್ ಕುಮಾರ್

ರಾಜ್ಯ ನಾಯಕ ವಿನಯ್ ಕುಮಾರ್ ಸೊರಕೆ ಮಾತನಾಡಿ, ಪುಟ್ಟ ಜಿಲ್ಲೆಯಾಗಿರುವ ಕೊಡಗು ರಾಜ್ಯದಲ್ಲಿಯೇ ಮಹತ್ತರ ಸ್ಥಾನ ಪಡೆದಿದೆ. ಕೋಟ್ಯಂತರ ಜನರಿಗೆ ನೀರುಣಿಸಿ, ಸೇನೆಗೆ ಅಪಾರ ಕೊಡುಗೆ ನೀಡಿರುವ ಜಿಲ್ಲೆ ಇದಾಗಿದೆ. ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟಿಸುವುದರಿAದ ಮಾತ್ರ ಪಕ್ಷದ ಮರುಸ್ಥಾಪನೆ ಸಾಧ್ಯ. ಸಮರ್ಥವಾಗಿ ಮುಂದಿನ ಚುನಾವಣೆಗಳನ್ನು ಎದುರಿಸಲು ಪ್ರತಿ ಕಾರ್ಯಕರ್ತ ಸನ್ನದ್ಧರಾಗಿರಬೇಕು. ಈ ನಿಟ್ಟಿನಲ್ಲಿ ನವಸಂಕಲ್ಪ ಚಿಂತನ ಶಿಬಿರ ಸಹಕಾರಿಯಾಗಿದೆ. ಕಾರ್ಯಕರ್ತರುಗಳು ಪಕ್ಷದ ಶಕ್ತಿಯಾಗಿದ್ದು, ನಾಯಕರು ಇವರುಗಳ ಸಲಹೆ, ಸಹಕಾರವನ್ನು ಬಳಸಿಕೊಳ್ಳಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ರಾಜ್ಯಕ್ಕೆ ನೀಡಿರುವ ಕೊಡುಗೆಯನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ದೌರ್ಬಲ್ಯ ಮುಚ್ಚಿ ಹಾಕಲು ಜಾತಿ, ಧರ್ಮದ ಹೆಸರಿನಲ್ಲಿ ಸಂಘರ್ಷ ಸೃಷ್ಟಿಯಾಗುತ್ತಿದೆ. ಆರ್.ಎಸ್.ಎಸ್. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಕಿಡಿಕಾರಿದರು.

ಧರ್ಮದ ರಾಜಕೀಯ ನಡೆಯುವುದಿಲ್ಲ - ಎಂ.ಸಿ.ಎನ್.

ಮಾಜಿ ಸಚಿವ ಎಂ.ಸಿ ನಾಣಯ್ಯ ಮಾತನಾಡಿ, ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೂ ಹದಗೆಟ್ಟಿರುವ ರಾಜಕೀಯ ಚಿತ್ರಣ ಬದಲಾವಣೆ ಆಗಬೇಕಾದ ಅಗತ್ಯವಿದೆ. ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದನ್ನು ರಾಷ್ಟçದಲ್ಲಿ ಎಲ್ಲೂ ಕಾಣಲು ಸಾಧ್ಯವಾಗುತ್ತಿಲ್ಲ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಕೆಲಸ ಮಾಡಬೇಕಾಗಿದೆ. ಅಂಬೇಡ್ಕರ್, ಕುವೆಂಪು, ಬಸವಣ್ಣ ಒಂದೊAದು ಭಾಗದಲ್ಲಿ ಹುಟ್ಟಿದರೂ ಅವರೆಲ್ಲರೂ ನಾಡನ್ನು ಒಂದುಗೂಡಿಸಿದವರು. ಆದರೆ, ಇಂದು ಧರ್ಮದ ಆಧಾರದ ಮೇಲೆ ದೇಶವನ್ನು ಒಡೆದು ಹಾಳು ಮಾಡಲಾಗುತ್ತಿದೆ. ಧರ್ಮದ ಆಧಾರದಲ್ಲಿ ರಾಜಕೀಯ ಮಾಡಿದ ಯಾವ ದೇಶವೂ ಉಳಿದಿಲ್ಲ. ಅಂತಹ ಅಪಾಯ ಇಂದು ಸೃಷ್ಟಿಯಾಗಿದೆ. ಯಾವುದೇ ಕೋಮುಭಾವನೆಯನ್ನು ಕೆರಳಿಸದೆ ದೇಶದಲ್ಲಿ ಆಳ್ವಿಕೆ ಮಾಡಿಕೊಂಡು ಬಂದಿದ್ದು ಕಾಂಗ್ರೆಸ್ ಪಕ್ಷ ಎಂದರು.

ಸಮಸ್ಯೆಗಳಿಗೆ ಹೋರಾಟ - ಧರ್ಮಜ

ಕೊಡಗು ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಜಿಲ್ಲೆಯಲ್ಲಿ ೧೦ ಹೆಚ್.ಪಿ. ಪಂಪ್ ಸೆಟ್‌ಗೆ ಇಂದಿಗೂ ಉಚಿತ ವಿದ್ಯುತ್ ನೀಡಿಲ್ಲ. ಈ ವಿಚಾರವಾಗಿ ಪಕ್ಷದಿಂದ ಸಾಕಷ್ಟು ಹೋರಾಟ ರೂಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದಿಟ್ಟ ಹೋರಾಟ ನಡೆಸಬೇಕಾಗಿದೆ. ಜಿಲ್ಲೆಯಲ್ಲಿ ವನ್ಯಜೀವಿ ಮಾನವ ಸಂಘರ್ಷ ಮಿತಿಮೀರಿದೆ. ಪರಿಣಾಮ ಜಿಲ್ಲೆಯ ರೈತರು, ಕಾರ್ಮಿಕರು ಸಮಸ್ಯೆಯಲ್ಲಿದ್ದಾರೆ. ಈ ಕುರಿತು ಹೋರಾಟ ರೂಪಿಸಬೇಕಾದ ಅಗತ್ಯವಿದೆ. ಬೂತ್ ಮಟ್ಟದಿಂದ ಜಿಲ್ಲೆಯ ಪ್ರತೀ ಹಂತದಲ್ಲಿ ಪಕ್ಷವನ್ನು ಸಂಘಟಿಸಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಬಿ. ಎ. ಜೀವಿಜಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಹಿರಿಯ ಮುಖಂಡರಾದ ಚಂದ್ರಮೌಳಿ, ಟಿ.ಪಿ. ರಮೇಶ್, ಕೆ.ಕೆ. ಮಂಜುನಾಥ್ ಕುಮಾರ್, ಯುವ ಮುಖಂಡ ಡಾ.ಮಂಥರ್ ಗೌಡ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಸೇರಿದಂತೆ ಮುಂಚೂಣಿ ಘಟಕ, ಬ್ಲಾಕ್ ಅಧ್ಯಕ್ಷರುಗಳು, ಪದಾಧಿಕಾರಿಗಳು ಭಾಗವಹಿಸಿದ್ದರು.