ಮಡಿಕೇರಿಯ ಗೌಡ ಸಮಾಜದಲ್ಲಿ ಜಿಲ್ಲಾ ಆಯುಷ್ ಇಲಾಖೆಯಿಂದ ಆಯೋಜಿತ ವಿಶ್ವ ಯೋಗ ದಿನಾಚರಣೆಯಲ್ಲಿ ಮೂರೂವರೆ ವರ್ಷದ ಪುಟಾಣಿ ಕೂಡ ಯೋಗಾಭ್ಯಾಸ ಮಾಡಿ ಗಮನ ಸೆಳೆಯಿತು. ಮಡಿಕೇರಿಯ ಚಂದನ್ ರಾವ್ ಮತ್ತು ಸೋನಿ ದಂಪತಿ ಪುತ್ರ ಜಗನ್ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ವಿವಿಧ ಆಸನಗಳನ್ನು ಸಲೀಸಾಗಿ ಪ್ರದರ್ಶಿಸಿದ. ಬಾಲ್ಯದಿಂದಲೇ ಯೋಗದಲ್ಲಿ ಆಸಕ್ತಿ ತಳೆದಿರುವ ಈ ಪುಟಾಣಿ ತಂದೆ ತಾಯಿಯೊಂದಿಗೆ ತಾನೂ ಮನೆಯಲ್ಲಿ ಯೋಗಾಭ್ಯಾಸದಲ್ಲಿ ನಿರತನಾಗುತ್ತಿರುವನಂತೆ. ಹೀಗಾಗಿ ಕಾರ್ಯಕ್ರಮದಲ್ಲಿ ೧ ಗಂಟೆ ಕಾಲ ಯೋಗಾಭ್ಯಾಸ ನಡೆದಾಗಲೂ ತನ್ನ ಪಾಡಿಗೆ ತಾನು ಅಮ್ಮನ ಪಕ್ಕದಲ್ಲಿ ಕುಳಿತು ಶಿಸ್ತು ಬದ್ದವಾಗಿ ಯೋಗ ಮಾಡುತ್ತಾ ಜಗನ್ ಗಮನ ಸೆಳೆದ. ಅಲ್ಲಿ ಹೇಳಿಕೊಟ್ಟದ್ದು ಮಾತ್ರವಲ್ಲ, ತನಗೆ ಗೊತ್ತಿರುವ ಇತರ ಯೋಗ ವಿಧಾನವನ್ನೂ ಜಗನ್ ನಗುತ್ತಲೇ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಯೋಗಾಭ್ಯಾಸದಲ್ಲಿ ೮೩ ವರ್ಷದ ಡಾ.ಎಂ.ಜಿ.ಪಾಟ್ಕರ್ ಮತ್ತು ೮೨ ವರ್ಷದ ಕೂಡಕಂಡಿ ಸೋಮಣ್ಣ ಕೂಡ ಸಕ್ರಿಯರಾಗಿ ಪಾಲ್ಗೊಂಡು ಗಮನ ಸೆಳೆದರು. - ಅನಿಲ್ ಎಚ್.ಟಿ.