ಮಡಿಕೇರಿ, ಜೂ. ೨೧ : ಕೊಡಗು ಮತ್ತು ಕೇರಳ ಗಡಿಯಲ್ಲಿರುವ ಕರಿಕೆ ಗ್ರಾಮವನ್ನು ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎನ್ನುವ ಆರೋಪಕ್ಕೆ ಪೂರಕವಾಗಿ ಇಲ್ಲಿನ ಜನರನ್ನು ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದೆ. ದೇಶದ ಪ್ರತಿ ಮನೆಗೆ ಶೌಚಾಲಯ ನೀಡುವುದಾಗಿ ಸರಕಾರ ಘೋಷಿಸಿದೆ, ಆದರೆ ಇಲ್ಲಿರುವ ಪ್ಲಾಸ್ಟಿಕ್ ಹೊದಿಕೆಯ ಶೌಚಾಲಯ ಘೋಷಣೆಯನ್ನು ಅಣಕಿಸುತ್ತಿದೆ.
ಕರಿಕೆ ಗ್ರಾ.ಪಂ ವ್ಯಾಪ್ತಿಯ ಎಳ್ಳುಕೊಚ್ಚಿಯ ಪೊಂಗಾನ ಎಂಬಲ್ಲಿ ಗ್ರಾಮಕ್ಕೆ ತೆರಳುವ ಸುಮಾರು ೨ ಕಿ.ಮೀ ದೂರದ ಮಣ್ಣಿನ ರಸ್ತೆ ಸಂಪೂರ್ಣ ವಾಗಿ ಹದಗೆಟ್ಟು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಈ ಭಾಗದಲ್ಲ್ಲಿ ಬಡ ಹಾಗೂ ಕೂಲಿ ಕಾರ್ಮಿಕರ ಮನೆಗಳೇ ಹೆಚ್ಚು ಇದ್ದು ತುರ್ತು ಸಂದರ್ಭಗಳಲ್ಲಿ ಪರದಾಡುವಂತಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ರಸ್ತೆ ತುಂಬಾ ಹೊಂಡ, ಗುಂಡಿಗಳಾಗಿವೆ, ಅಲ್ಲದೆ ಮಳೆಯಿಂದ ಕೆಸರು ಗದ್ದೆಯಂತ್ತಾಗಿದೆ. ವಾಹನ ಸವಾರರು, ವಿದ್ಯಾರ್ಥಿಗಳು, ಪಾದಚಾರಿಗಳ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ. ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ವಾಗಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಮಳೆ ತೀವ್ರಗೊಂಡರೆ ಸಂಚಾರವೇ ಸ್ಥಗಿತಗೊಳ್ಳಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ಲಾಸ್ಟಿಕ್ ಹೊದಿಕೆಯ ಶೌಚಾಲಯ
ಕೊಚ್ಚಿ ಕಾಲೋನಿ ವಾರ್ಡ್ ನಂ.೧ ರಲ್ಲಿ ಪ್ಲಾಸ್ಟಿಕ್ ಹೊದಿಕೆಯ ಶೌಚಾಲಯಗಳಿವೆ. ಈ ಗ್ರಾಮಕ್ಕೆ ಇದು ಅನಿವಾರ್ಯವಾಗಿಬಿಟ್ಟಿದೆ. ಸುಸಜ್ಜಿತ ಶೌಚಾಲಯ ವ್ಯವಸ್ಥೆಯಿಲ್ಲದೆ ಮಹಿಳೆಯರು ಮುಜುಗರ ಅನುಭವಿಸುವ ಪರಿಸ್ಥಿತಿ ಇದೆ. ಜಿ.ಪಂ ಹಾಗೂ ಜಿಲ್ಲಾಡಳಿತ ಕರಿಕೆ ಗ್ರಾಮದ ಸಮಸ್ಯೆಗಳನ್ನು ಬಗೆ ಹರಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.