ಕುಡೆಕಲ್ ಸಂತೋಷ್ಮಡಿಕೇರಿ,ಜೂ.೧೨೦: ಸರಕಾರಿ ಜಾಗ., ಮೈದಾನ., ದೇವರ ಕಾಡು., ಸಾರ್ವಜನಿಕ ಕೆರೆ ದಂಡೆ., ರಸ್ತೆ ಬದಿಯ ಜಾಗ., ಹೀಗೇ ಇಂತಹ ಸಾರ್ವಜನಿಕ ಆಸ್ತಿಗಳನ್ನು ಒತ್ತುವರಿ ಮಾಡಿಕೊಳ್ಳುವದನ್ನು ನೋಡಿದ್ದೇವೆ., ನೋಡುತ್ತಲೇ ಇದ್ದೇವೆ.., ಅಷ್ಟೇ ಏಕೇ..? ನದಿ ದಡವನ್ನೂ ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳು ಸಾಕಷ್ಟಿವೆ.., ಆದರಿಲ್ಲಿ ಹರಿಯುತ್ತಿರುವ ನದಿಯ ದಿಕ್ಕನ್ನೇ ಬದಲಾಯಿಸಿ ನದಿಯ ಜಾಗವನ್ನೇ ಒತ್ತುವರಿ ಮಾಡಿಕೊಂಡಿರುವ ವಿಚಿತ್ರ ಪ್ರಕರಣ ಗೋಚರಿಸಿದೆ..!

೨೦೧೮ರ ದುರಂತ ಯಾರಿಂದಲೂ ಮರೆಯಲು ಸಾಧ್ಯವಿಲ್ಲ., ಆ ಚಿತ್ರಣ ಇನ್ನೂ ಕೂಡ ಸ್ಮೃತಿಪಟಲದಿಂದ ಮಾಸಿಲ್ಲ., ಮಡಿಕೇರಿ ತಾಲೂಕಿನ ಆರು ಗ್ರಾಮಗಳಲ್ಲಿ ಸಂಭವಿಸಿದAತಹ ಘೋರ ದುರಂತದಲ್ಲಿ ಅನೇಕ ಕಷ್ಟ, ನಷ್ಟಗಳೊಂದಿಗೆ ಜೀವ ಹಾನಿ ಕೂಡ ಸಂಭವಿಸಿದೆ., ಈ ಘಟನೆಗೆ ಗಾಳಿಬೀಡು ಗ್ರಾಮ ಪಂಚಾಯ್ತಿ ಗೊಳಪಡುವ, ಎರಡನೇ ಮೊಣ್ಣಂಗೇರಿ ಗ್ರಾಮ ಕೂಡ ಬಲಿಯಾಗಿದೆ. ಇದೀಗ ಹಾನಿಗೊಳಗಾದ ಪ್ರದೇಶದಲ್ಲಿ ಅನಾಹುತ ಸಂಭವಿಸದAತೆ ಪರಿಹಾರ ಕಾರ್ಯಗಳು ನಡೆಯುತ್ತಿರುವಾಗಲೇ ಖಾಸಗಿ ವ್ಯಕ್ತಿಯೋರ್ವರು ರಸ್ತೆ ಬದಿಯಲ್ಲಿ ಹರಿಯುತ್ತಿರುವ ನದಿಯನ್ನು ಅಡ್ಡಗಟ್ಟಿ, ದಿಕ್ಕನ್ನು ಬದಲಿಸಿ ನದಿ ಜಾಗವನ್ನೇ ಒತ್ತುವರಿ ಮಾಡಿಕೊಂಡಿರುವದು ಕಂಡು ಬಂದಿದೆ..!

ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳಪಡುವ ಎರಡನೇ ಮೊಣ್ಣಂಗೇರಿ ಗ್ರಾಮ ಮಂಗಳೂರು ರಾಜ್ಯ ಹೆದ್ದಾರಿಯ ಮದೆ ಗ್ರಾಮದ ಬಳಿ ಇದೆ. ಈ ಹೆದ್ದಾರಿಯ ಒತ್ತಿನಲ್ಲೇ ಮನೆ, ಗದ್ದೆ, ತೋಟಗಳಿದ್ದವು. ೨೦೧೮ರ ಭೂಕುಸಿತದಲ್ಲಿ ಅವುಗಳೆಲ್ಲವೂ ನಾಶವಾದವು. ಗುಡ್ಡವೇ ಕರಗಿ ಜಾರಿದ ಮಣ್ಣು ಗದ್ದೆ, ತೋಟದ ನಡುವೆ ಹರಿಯುತ್ತಿದ್ದ ನದಿಯೊಂದಿಗೆ ಕೊಚ್ಚಿ ಹೋಗಿದೆ. ಒಂದಷ್ಟು ಮಣ್ಣು ಅಲ್ಲಲ್ಲೇ ಶೇಖರಣೆಗೊಂಡಿದೆ. ನಡುವೆ ಪಯಸ್ವಿನಿ ನದಿ ಈಗಲೂ ಹರಿಯುತಲಿದೆ. ರಸ್ತೆಯ ಬಲ ಬದಿಯಲ್ಲಿ

(ಮೊದಲ ಪುಟದಿಂದ) ಮತ್ತೆ ಕುಸಿತ ಸಂಭವಿಸದAತೆ ತಡೆಗಟ್ಟಲು ಸರಕಾರದ ವತಿಯಿಂದ ತಡೆಗೋಡೆ ಗಳನ್ನು ನಿರ್ಮಿಸಲಾಗುತ್ತಿದೆ.

ಕರ್ತೋಜಿ ಎಂಬಲ್ಲಿ ನದಿಯ ಸನಿಹದಲ್ಲೇ ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ ಜಾಗವಿದ್ದು, ಇದೀಗ ಅವರು ಜಾಗವನ್ನು ಸುಳ್ಯದ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. ಜಾಗ ಖರೀದಿ ಮಾಡಿರುವ ವ್ಯಕ್ತಿಗಳು ಇದೀಗ ನದಿ ಹರಿಯುತ್ತಿರುವ ಜಾಗ ತಮಗೆ ಸೇರಿದ್ದೆಂದು ಎಕ್ಸ್ಕವೇಟರ್ ಯಂತ್ರ ಬಳಸಿ ಹರಿಯುವ ನದಿಯ ದಿಕ್ಕನ್ನು ರಸ್ತೆ ಕಡೆಗೆ ಬದಲಾಯಿಸಿ ನದಿ ಹರಿಯುತ್ತಿದ್ದ ಜಾಗಕ್ಕೆ ಮಣ್ಣು ಹಾಕಿ ಮುಚ್ಚಿ ಹಾಕಿದ್ದಾರೆ. ನದಿ ರಸ್ತೆ ಬದಿಯಲ್ಲಿ ಹರಿಯುತ್ತಿದ್ದು, ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾದರೆ ರಸ್ತೆ ಮೇಲೆ ಹರಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ..!

ಗದ್ದೆಯ ಜಾಗದಲ್ಲಿ ನದಿ..!

ಇಷ್ಟು ವರ್ಷಗಳ ಕಾಲ ರಸ್ತೆ ಬದಿಯಿಂದ ಗದ್ದೆಯಾಚೆ ಪಯಸ್ವಿನಿ ನದಿ ಹರಿಯುತ್ತಿತ್ತು. ಭೂಕುಸಿತದಲ್ಲಿ ಗದ್ದೆ ಕೊಚ್ಚಿಹೋದ ಬಳಿಕ ಅದೇ ಜಾಗದಲ್ಲಿ ನದಿ ಹರಿಯುತ್ತಿತ್ತು. ಗದ್ದೆ ಇದ್ದ ಸ್ವಲ್ಪ ಜಾಗವನ್ನು ತಡೆಗೋಡೆ ಆಕ್ರಮಿಸಿಕೊಂಡಿದೆ. ಇದೀಗ ಖಾಸಗಿ ವ್ಯಕ್ತಿಗಳು ನದಿಯ ಹರಿವನ್ನು ತಿರುಗಿಸಿದ್ದು, ಗದ್ದೆ ಇದ್ದ ಜಾಗದಲ್ಲಿ ನದಿ ಹರಿಯುತ್ತಿದೆ. ಈ ಗದ್ದೆ ಜಾಗ ಬೇರೆ ಖಾಸಗಿ ವ್ಯಕ್ತಿಗಳಿಗೆ ಸೇರಿದ್ದೆಂದು ಸ್ಥಳೀಯ ಗ್ರಾಮಸ್ಥರು ಹೇಳುತ್ತಾರೆ. ನದಿಯನ್ನು ತಿರುಗಿಸುವ ಸಂದರ್ಭ ಪ್ರಶ್ನೆ ಮಾಡಿದಾಗ ‘ಈ ಜಾಗ ತಮ್ಮದೆಂದು ಗ್ರಾಮಸ್ಥರನ್ನೇ ಜಾಗದ ಮಾಲೀಕರು ನಿಂದಿಸಿದರು’ ಎಂದು ಸ್ಥಳೀಯರು ಹೇಳುತ್ತಾರೆ. ಸರಕಾರದ ಸ್ವತ್ತಾಗಿರುವ ನದಿಯೊಳಗೆ ಯಂತ್ರ ಬಳಸಿ ಕೆಲಸ ಮಾಡುತ್ತಿದ್ದ ಸಂದರ್ಭ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರು ಸ್ಥಳದಲ್ಲಿದ್ದರೂ ಸುಮ್ಮನಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ. ಸಂಬAಧಿಸಿದ ಇಲಾಖೆ, ಗ್ರಾಮ ಪಂಚಾಯ್ತಿಯವರು ಈ ಬಗ್ಗೆ ಗಮನ ಹರಿಸಿ, ಸರ್ವೆ ಕಾರ್ಯ ನಡೆಸಿ ನದಿ ಜಾಗವನ್ನು ರಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ.

ನದಿ ದಂಡೆಗಳನ್ನು ರಕ್ಷಣೆ ಮಾಡಿ., ನದಿಯ ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ಹೋರಾಟಗಳು, ಯೋಜನೆಗಳನ್ನು ರೂಪಿಸುತ್ತಿರುವಾಗ ಇತ್ತ ನದಿಯನ್ನೇ ತಿರುಗಿಸಿರುವಾಗ ಸಂಬAಧಿಸಿದ ಆಡಳಿತ ಮೌನ ವಹಿಸಿರುವ ಬಗ್ಗೆ ಗ್ರಾಮಸ್ಥರಿಂದ ಆಕ್ಷೇಪ ವ್ಯಕ್ತವಾಗಿದೆ. ನದಿಯಿಂದ ಮರಳು ತೆಗೆದರೂ ಕ್ರಮ ಕೈಗೊಳ್ಳುವ ಇಲಾಖೆಗಳು ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬದು ಪ್ರಶ್ನೆಯಾಗಿದೆ..?