*ಗೋಣಿಕೊಪ್ಪ, ಜೂ. ೨೧: ಬದುಕಿನ ಒತ್ತಡಗಳನ್ನು ಸಂಪೂರ್ಣ ವಾಗಿ ತಗ್ಗಿಸುವ ಶಕ್ತಿ ಯೋಗದಿಂದ ಸಿದ್ಧಿಸುತ್ತದೆ. ಯುವಕರು ಯೋಗಾಭ್ಯಾಸದಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವಾಣಿಜ್ಯ ಕಟ್ಟಡದಲ್ಲಿ ಸಂಪೂರ್ಣ ಸ್ವಾಸ್ಥ÷್ಯಯೋಗ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಮನಸ್ಸನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗದಿಂದ ಸಾಧ್ಯ. ಪ್ರಧಾನಮಂತ್ರಿ ಮೋದಿ ಅವರ ಪ್ರೇರಣೆಯಿಂದ ಯುವಸಮುದಾಯ ಯೋಗಾಭ್ಯಾಸಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಆರೋಗ್ಯವನ್ನು ಕಾಪಾಡಿ ಕೊಳ್ಳಲು ಯೋಗಕ್ಕಿಂತ ಬೇರೆ ಔಷಧಿ ಇಲ್ಲ; ಯೋಗದಿಂದ ಪ್ರತಿದಿನ ಲವಲವಿಕೆಯಿಂದ, ಚಟುವಟಿಕೆ ಯಿಂದ ಇರಲು ಸಾಧ್ಯವಾಗಬಲ್ಲದು ಎಂದು ಹೇಳಿದ ಅವರು, ಪ್ರತಿನಿತ್ಯ ನಾನು ಕನಿಷ್ಟ ೩೦ ನಿಮಿಷಗಳವರೆಗೆ ವ್ಯಾಯಾಮ, ಯೋಗ ಮಾಡುತ್ತೇನೆ. ಹೀಗಾಗಿ ಪ್ರತಿನಿತ್ಯ ಹಸನ್ಮುಖಿ ಯಾಗಿರಲು ಸಾಧ್ಯವಾಗುತ್ತಿದೆ ಎಂದು ತಮ್ಮ ಆರೋಗ್ಯದ ಗುಟ್ಟನ್ನು ತಿಳಿಸಿದರು.

ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷೆ ಚೈತ್ರ ಬಿ. ಚೇತನ್ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಅಧ್ಯಕ್ಷ ಕಾಡ್ಯಮಾಡ.ಬಿ. ಗಿರೀಶ್ ಗಣಪತಿ, ಗ್ರಾ.ಪಂ. ಸದಸ್ಯರುಗಳಾದ ನೂರೆರ ರತಿ ಅಚ್ಚಪ್ಪ, ಬಿ.ಎನ್. ಪ್ರಕಾಶ್, ರಾಜೇಶ್, ಪೊನ್ನಂಪೇಟೆ ಗ್ರಾ.ಪಂ. ಸದ್ಯಸರುಗಳಾದ ಮೂಕಳೆರ ಮಧು, ರಾಮಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಉಮಾಮಹೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಡಾ. ಚಂದ್ರಶೇಖರ್, ಉದ್ಯಮಿ ಶೇಖರ್ ಭಂಡಾರಿ ಇದ್ದರು. ಕಾರ್ಯಕ್ರಮದಲ್ಲಿ ಪತಂಜಲಿ ಯೋಗಕೇಂದ್ರ ಯೋಗಶಿಕ್ಷಕ ಗುರುರಂಗಯ್ಯ ಬಲ್ಲಾಳ್ ಅವರನ್ನು ಸನ್ಮಾನಿಸಲಾಯಿತು. ರೇಖಾ ಶ್ರೀಧರ್, ಕುದುಕುಳಿ ಸೋಮಯ್ಯ ಕಾರ್ಯಕ್ರಮ ನಿರ್ವಹಿಸಿದರು.