ಶ್ರೇಷ್ಠ ಭಾರತದ ಪ್ರತಿಬಿಂಬ ಬೆಂಗಳೂರು - ಪ್ರಧಾನಿ ಮೋದಿ ಬೆಂಗಳೂರು, ಜೂ. ೨೦: ಬೆಂಗಳೂರು ದೇಶದ ಯುವಕರ ಕನಸಿನ ನಗರ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ನಗರದ ಕೊಮ್ಮಘಟ್ಟದಲ್ಲಿ ೨೭,೦೦೦ ಕೋಟಿ ಮೊತ್ತದ ಹಲವು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಪ್ರಧಾನಿ ಮೋದಿ ಮಾತನಾಡಿದರು. ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಪ್ರಧಾನಿ, ‘ಕರುನಾಡ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು. ಬೆಂಗಳೂರಿನ ಮಹಾಜನತೆಗೆ ನನ್ನ ನಮಸ್ಕಾರಗಳು. ರಾಜ್ಯದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆಗಳನ್ನ ಜಾರಿಗೊಳಿಸಲು ನನಗೆ ಸಂತೋಷವಾಗುತ್ತಿದೆ’ ಎಂದರು. ಕರ್ನಾಟಕದ ಕ್ಷಿಪ್ರ ಅಭಿವೃದ್ಧಿಗಾಗಿ ‘ಡಬಲ್ ಇಂಜಿನ್’ ಸರ್ಕಾರವು ನೀಡಿದ ವಿಶ್ವಾಸವನ್ನು ಇಂದು ನಾವೆಲ್ಲರೂ ಮತ್ತೊಮ್ಮೆ ನೋಡುತ್ತಿದ್ದೇವೆ. ಇಂದು ೨೭ ಸಾವಿರ ಕೋಟಿ ರೂ.ಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆಯುತ್ತಿದೆ. ಡಬಲ್ ಇಂಜಿನ್ ಸರ್ಕಾರದಲ್ಲಿ ಅಭಿವೃದ್ಧಿಯೇ ಗುರಿಯಾಗಿತ್ತು. ಕರ್ನಾಟಕದ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರ ಈ ಹಿಂದೆ ಭರವಸೆ ನೀಡಿತ್ತು. ಶ್ರೇಷ್ಠ ಭಾರತದ ಪ್ರತಿಬಿಂಬ ಬೆಂಗಳೂರು. ಲಕ್ಷಾಂತರ ಯುವಕರ ಕನಸಿನ ನಗರ ಬೆಂಗಳೂರು. ನಗರದ ಟ್ರಾಫಿಕ್ ಮುಕ್ತಿಗೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರೈಲು, ರಸ್ತೆ, ಮೆಟ್ರೋ ಅಂಡರ್ ಪಾಸ್, ಸಬ್ ಅರ್ಬನ್, ಬೈಪಾರ್, ರಿಂಗ್ ರಸ್ತೆಗಳ ಅಭಿವೃದ್ಧಿಯಾಗಿದೆ. ಇಲ್ಲಿನ ಜನರ ಜೀವನ ಸರಳಿಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ. ೮ ವರ್ಷಗಳಿಂದ ಬೆಂಗಳೂರು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ೪೦ ವರ್ಷಗಳಲ್ಲಿ ಆಗದ್ದನ್ನ ೪೦ ತಿಂಗಳಲ್ಲಿ ಮಾಡಿದ್ದೇವೆ ಎಂದು ಹೇಳಿದರು.

ಅಗ್ನಿಪಥ್ ಯೋಜನೆ: 'ಕೆಲವು ನಿರ್ಧಾರಗಳು ಕಹಿ ಎನಿಸಬಹುದು'

ಬೆಂಗಳೂರು, ಜೂ. ೨೦ : ರಕ್ಷಣಾ ಪಡೆಗಳ ಹೊಸ ನೇಮಕಾತಿ ಯೋಜನೆ ಅಗ್ನಿಪಥ್ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಈ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಸರ್ಕಾರದ ಕೆಲವು ಕ್ರಮಗಳು ಇಂದು ಕಹಿ ಎನಿಸಿದರೂ ನಾಳೆ ಫಲ ನೀಡಲಿವೆ ಎಂದು ಸೋಮವಾರ ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಹಲವು ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮಗಳ ನಂತರ ಕೊಮ್ಮಘಟ್ಟದಲ್ಲಿ ಬೃಹತ್ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಕೆಲವು ಕ್ರಮಗಳು ಪ್ರಸ್ತುತ ದಿನಗಳಲ್ಲಿ ಕಹಿಯಾಗಿ ಕಾಣಿಸಬಹುದು. ಆದರೆ, ಅವು ಮುಂದಿನ ದಿನಗಳಲ್ಲಿ ಫಲ ನೀಡುತ್ತವೆ ಎಂದು ತಿಳಿಸಿದರು. ಸರ್ಕಾರಿ ವಲಯದಷ್ಟೇ ಖಾಸಗಿ ಕ್ಷೇತ್ರವೂ ಮುಖ್ಯವಾಗಿದೆ ಎಂದ ಪ್ರಧಾನಿ, ಇಬ್ಬರಿಗೂ ಸಮಾನ ಅವಕಾಶಗಳಿವೆ. ಆದರೆ, ಜನರ ಮನಸ್ಥಿತಿ ಬದಲಾಗಿಲ್ಲ, ಅವರು ಖಾಸಗಿ ಉದ್ಯಮಗಳ ಬಗ್ಗೆ ಅಷ್ಟು ಚೆನ್ನಾಗಿ ಮಾತನಾಡುವುದಿಲ್ಲ ಎಂದು ಮೋದಿ ಹೇಳಿದರು. ಬೆಂಗಳೂರಿಗರ ಎಲ್ಲ ಕನಸುಗಳನ್ನು ನನಸು ಮಾಡಲು ನಾವು ಬದ್ಧರಾಗಿದ್ಧೇವೆ. ನಲವತ್ತು ವರ್ಷ ಚರ್ಚೆಯಲ್ಲಿದ್ದ ಸಬ್ ಅರ್ಬನ್ ರೈಲು ಯೋಜನೆ ಆರಂಭಿಸುವ ಪುಣ್ಯ ನಮಗೆ ಸಿಕ್ಕಿದೆ ಎಂದರು.

ಅಗ್ನಿಪಥ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಸೇನೆ

ನವದೆಹಲಿ, ಜೂ. ೨೦ : ಕೇಂದ್ರ ಸರ್ಕಾರ ಇತ್ತೀಚಿಗೆ ಘೋಷಣೆ ಮಾಡಿದ ಅಗ್ನಿಪಥ್ ಯೋಜನೆ ಅಡಿ ನೇಮಕಾತಿ ನಡೆಸಲು ಭಾರತೀಯ ಸೇನೆ ಸೋಮವಾರ ಅಧಿಸೂಚನೆ ಹೊರಡಿಸಿದ್ದು, ಜುಲೈನಲ್ಲಿ ಆನ್‌ಲೈನ್ ನೋಂದಣಿ ಆರಂಭವಾಗಲಿದೆ. ಹೊಸ ಮಾದರಿಯ ಸೇನಾ ನೇಮಕಾತಿಯಲ್ಲಿ ಎಲ್ಲಾ ಉದ್ಯೋಗ ಆಕಾಂಕ್ಷಿಗಳು ವೆಬ್‌ಸೈಟ್‌ನಲ್ಲಿ ಆನ್‌ಲೈನ್ ನೋಂದಣಿ ಕಡ್ಡಾಯವಾಗಿದ್ದು, ಆನ್‌ಲೈನ್ ನೋಂದಣಿ ಜುಲೈನಲ್ಲಿ ಪ್ರಾರಂಭವಾಗುತ್ತದೆ ಎಂದು ಸೇನೆ ತಿಳಿಸಿದೆ. ಭಾರತೀಯ ಸೇನೆಯಲ್ಲಿ ‘ಅಗ್ನಿವೀರರ' ಒಂದು ವಿಶಿಷ್ಟ ಶ್ರೇಣಿಯನ್ನು ರೂಪಿಸುತ್ತದೆ. ಇದು ಅಸ್ತಿತ್ವದಲ್ಲಿರುವ ಇತರ ಶ್ರೇಣಿಗಳಿಗಿಂತ ಭಿನ್ನವಾಗಿರುತ್ತದೆ ಎಂದು ಸೇನೆ ಹೇಳಿದೆ. ಈ ಯೋಜನೆಯ ವಿವರವಾದ ಟಿಪ್ಪಣಿಯಲ್ಲಿ ಸೇನೆಯು, 'ಅಗ್ನಿವೀರರ' ಅಧಿಕೃತ ರಹಸ್ಯ ಕಾಯಿದೆ, ೧೯೨೩ರ ಅಡಿಯಲ್ಲಿ ಯಾವುದೇ ಅನಧಿಕೃತ ವ್ಯಕ್ತಿ ಅಥವಾ ಮೂಲಕ್ಕೆ ನಾಲ್ಕು ವರ್ಷಗಳ ಸೇವಾ ಅವಧಿಯಲ್ಲಿ ಗಳಿಸಿದ ವರ್ಗೀಕೃತ ಮಾಹಿತಿಯನ್ನು ಬಹಿರಂಗಪಡಿಸುವುದನ್ನು ನಿರ್ಬಂಧಿಸುತ್ತದೆ ಎಂದು ಹೇಳಿದೆ. ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ವಿರೋಧಿಸಿ ದೇಶದ ಹಲವು ಭಾಗಗಳಲ್ಲಿ ಯುವ ಜನತೆ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸೇನಾಮುಖ್ಯಸ್ಥರು ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ನೇಮಕಾತಿ ಪ್ರಕ್ರಿಯೆಗೆ ಪ್ರಮಾಣಪತ್ರ ಕಡ್ಡಾಯ ಎಂದು ಸೇನೆ ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಸೇನಾ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಅವರು, ಕೇಂದ್ರ ಸರ್ಕಾರ ಘೋಷಿಸಿರುವ ಸೇನಾ ನೇಮಕಾತಿಗೆ ಸಂಬAಧಿಸಿದ ‘ಅಗ್ನಿಪಥ' ಯೋಜನೆಗೆ ಅರ್ಜಿ ಸಲ್ಲಿಸುವವರು ಲಿಖಿತ ರೂಪದಲ್ಲಿ ಪ್ರತಿಜ್ಞಾ ಘೋಷಣೆಯನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋದ ಪೊಲೀಸರು

ಗುವಾಹಟಿ, ಜೂ. ೨೦ : ಅಸ್ಸಾಂನಲ್ಲಿ ಭಾರೀ ಮಳೆಯಾಗುತ್ತಿದ್ದು, ನಾಗಾಂವ್ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದ ಸೆಳೆತಕ್ಕೆ ಸಿಕ್ಕಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಮತ್ತು ಕಾನ್ ಸ್ಟೆಬಲ್ ಕೊಚ್ಚಿಹೋಗಿದ್ದಾರೆ.ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಜನರಿಗೆ ಸಹಾಯ ಮಾಡಲು ಹೋದ ಪ್ರಬಾರಿ ಅಧಿಕಾರಿ ಸಮುಜ್ಜಲ್ ಕಾಕತಿ ಮತ್ತು ಕಾನ್‌ಸ್ಟೆಬಲ್ ಮೃತಪಟ್ಟಿದ್ದು, ಮತ್ತಿಬ್ಬರನ್ನು ರಕ್ಷಿಸಲಾಗಿದೆ. ಸಮುಜ್ಜಲ್ ಕಾಕತಿ ಹಾಗೂ ರಾಜೀಬ್ ಬೊರ್ಡೊಲೊಯ್ ಅವರ ಮೃತದೇಹ ಇಂದು ಪತ್ತೆಯಾಗಿದೆ. ಅಸ್ಸಾಂನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಾವಿನ ಸಂಖ್ಯೆ ೭೨ಕ್ಕೆ ಏರಿಕೆಯಾಗಿದ್ದು, ೪೦ ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇಘಾಲಯದಲ್ಲಿ ಕಳೆದ ಎರಡು ತಿಂಗಳಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತದಲ್ಲಿ ೩೦ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಒಂದೇ ಮನೆಯಲ್ಲಿ ೯ ಮಂದಿ ಶವ ಪತ್ತೆ; ಆತ್ಮಹತ್ಯೆ ಶಂಕೆ!

ಸಾAಗ್ಲಿ (ಮಹಾರಾಷ್ಟç), ಜೂ. ೨೦ : ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಸೋಮವಾರ ಒಂದೇ ಕುಟುಂಬದ ಒಂಭತ್ತು ಸದಸ್ಯರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ. ಮುಂಬೈನಿAದ ೩೫೦ ಕಿ.ಮೀ ದೂರದಲ್ಲಿರುವ ಸಾಂಗ್ಲಿ ಜಿಲ್ಲೆಯ ಮಹೈಸಾಲ್‌ನಲ್ಲಿರುವ ಮನೆಯೊಂದರಲ್ಲಿ ಮೃತದೇಹಗಳು ಪತ್ತೆಯಾಗಿವೆ. ಮೂರು ಶವಗಳು ಮನೆಯ ಒಂದೇ ಸ್ಥಳದಲ್ಲಿ ಕಂಡುಬAದರೆ, ಆರು ಮೃತದೇಹಗಳು ಮನೆಯ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿವೆ. ಎಂದು ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಿತ್ ಗೆಡಮ್ ಹೇಳಿದ್ದಾರೆ. ಇದು ಆತ್ಮಹತ್ಯೆಯ ಪ್ರಕರಣ ಎಂದು ಶಂಕಿಸಲಾಗಿದೆ. ಆದರೆ ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಮೃತರೆಲ್ಲರೂ ವಿಷಕಾರಿ ಪದಾರ್ಥವನ್ನು ಸೇವಿಸಿದ್ದಾರೆ ಎಂದು ಶಂಕಿಸಲಾಗಿದ್ದು ಸದ್ಯ ತನಿಖೆ ನಡೆಯತ್ತಿದೆ.

ರಾಮಮಂದಿರಕ್ಕೆ : ದೇಣಿಗೆ ನೀಡಿದ್ದ ೨೨ ಕೋಟಿ ರೂ. ಮೊತ್ತದ ಚೆಕ್‌ಗಳು ಬೌನ್ಸ್!

ಲಖನೌ, ಜೂ. ೨೦ : ಶ್ರೀರಾಮ ಜನ್ಮಭೂಮಿ ಆವರಣದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನೇತೃತ್ವದಲ್ಲಿ ನಡೆದ ದೇಣಿಗೆ ಅಭಿಯಾನದಲ್ಲಿ ದೇವಾಲಯದ ಟ್ರಸ್ಟ್ನ ಬೊಕ್ಕಸಕ್ಕೆ ಬರೋಬ್ಬರಿ ೫,೪೫೭ ಕೋಟಿ ರೂ. ಬಂದಿತ್ತು. ಆದರೆ ಅಖಿಲ ಭಾರತ ಮಟ್ಟದಲ್ಲಿ ದೇಣಿಗೆ ಅಭಿಯಾನದ ಮೇಲ್ವಿಚಾರಣೆ ನಡೆಸುತ್ತಿರುವ ತಂಡದ ತಾತ್ಕಾಲಿಕ ವರದಿಯ ಪ್ರಕಾರ ೨೨ ಕೋಟಿ ಮೌಲ್ಯದ ಚೆಕ್‌ಗಳು ಬೌನ್ಸ್ ಆಗಿವೆ. ಮತ್ತೊಂದೆಡೆ, ಟ್ರಸ್ಟ್ ಖಾತೆಗಳ ಜಿಲ್ಲಾವಾರು ಲೆಕ್ಕಪರಿಶೋಧನೆ ನಡೆಯುತ್ತಿರುವುದರಿಂದ ಇದುವರೆಗೆ ಸಂಗ್ರಹಿಸಲಾದ ಒಟ್ಟು ಮೊತ್ತದ ಅಂಕಿಅAಶವು ತಾತ್ಕಾಲಿಕವಾಗಿದೆ. ಟ್ರಸ್ಟ್ ಮೂಲಗಳ ಪ್ರಕಾರ, ಬೌನ್ಸ್ ಆಗಿರುವ ಚೆಕ್‌ಗಳನ್ನು ಪ್ರತ್ಯೇಕಿಸಿ ಹೊಸ ಆಡಿಟ್ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಚೆಕ್‌ಗಳು ಬೌನ್ಸ್ ಆದ ಕಾರಣ ತಿಳಿದುಕೊಳ್ಳಲು ಪರಿಶೀಲಿಸಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದಾಗಿ ಬೌನ್ಸ್ ಆಗಿರುವ ಚೆಕ್‌ಗಳನ್ನು ಸಂಬAಧಪಟ್ಟ ಬ್ಯಾಂಕ್‌ನ ಒಪ್ಪಿಗೆ ಪಡೆದ ನಂತರ ಮತ್ತೆ ಪ್ರತಿನಿಧಿಸಲಾಗುತ್ತದೆ ಎಂದು ಟ್ರಸ್ಟ್ನ ಸದಸ್ಯರೊಬ್ಬರು ಹೇಳಿದ್ದಾರೆ. ೨೦೨೧ರ ಜನವರಿ ೧೪ರಂದು ೪೪ ದಿನಗಳ ಕಾಲ ನಿಧಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಲಾಯಿತು ಎಂಬುದನ್ನು ಸ್ಮರಿಸಬಹುದು. ಆರಂಭಿಕ ಅಭಿಯಾನವೂ ೨೦೨೧ರ ಫೆಬ್ರವರಿ ೨೮ರಂದು ಮುಕ್ತಾಯವಾಗಿದ್ದು ೨,೧೦೦ ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಅಭಿಯಾನ ಪ್ರಾರಂಭಕ್ಕೂ ಮುನ್ನ ದೇವಾಲಯದ ಟ್ರಸ್ಟ್ ರಾಮಮಂದಿರ ನಿರ್ಮಾಣಕ್ಕಾಗಿ ೧೧೦೦ ಕೋಟಿ ರೂ. ಅಂದಾಜಿಸಲಾಗಿತ್ತು. ಮಂದಿರವನ್ನು ೩೦೦ ರಿಂದ ೪೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಅಂದಾಜಿಸಲಾಗಿತ್ತು.