ಗೋಣಿಕೊಪ್ಪಲು, ಜೂ. ೧೯: ಕೊಡಗಿನ ನಾನಾ ಭಾಗಗಳಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನರು ಇನ್ನೂ ಕೂಡ ಸ್ವಂತ ಸೂರನ್ನು ಹೊಂದಲು ನಿವೇಶನ ಇಲ್ಲದೆ ಕಷ್ಟದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಈ ಬಗ್ಗೆ ಅನೇಕ ಹೋರಾಟ ನಡೆಸಿದರೂ ಜಿಲ್ಲಾಡಳಿತ ಬಡವರಿಗೆ ಅದರಲ್ಲೂ ಎಸ್.ಟಿ.ಎಸ್.ಸಿ. ಜನಾಂಗದವರಿಗೆ ನಿವೇಶನ ದೊರಕ್ಕಿಲ್ಲ. ಆದಷ್ಟು ಬೇಗನೇ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಎಸ್.ಸಿ.ಎಸ್.ಟಿ. ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಮಾಯಮುಡಿ ರಮೇಶ್ ಒತ್ತಾಯಿಸಿದರು.
ಕೊಡಗು ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ತಮಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದರು.
ಶೇ. ೩೪ ರಷ್ಟು ಜನರು ದಲಿತರಿದ್ದು ಇದರಲ್ಲಿ ಶೇ. ೩೭ ಜನರು ಕೂಲಿ ಕಾರ್ಮಿಕರಿದ್ದಾರೆ.
ಸರ್ಕಾರದ ಅಂಕಿ ಅಂಶ ಪ್ರಕಾರ ಹಿಂದಿನ ವೀರಾಜಪೇಟೆ ತಾಲೂಕಿನಲ್ಲಿ ಸುಮಾರು ೫ ಸಾವಿರಕ್ಕೂ ಹೆಚ್ಚು ಮಂದಿ ಕಾಫಿ ತೋಟದ ಮಾಲೀಕರ ಲೈನ್ ಮನೆಗಳಲ್ಲಿ ವಾಸ ಮಾಡುತ್ತಿದ್ದು, ಇವರಿಗೆ ಸಂಬAಧಪಟ್ಟ ಸೂಕ್ತ ದಾಖಲಾತಿಗಳಿರುವುದಿಲ್ಲ ಎಂದು ರಮೇಶ್ ಮಾಯಮುಡಿ ಅಧಿಕಾರಿಗಳ ಮುಂದೆ ತಮ್ಮ ಅಹವಾಲು ಸಲ್ಲಿಸಿದರು.
ಸಂಘಟನೆಯ ವತಿಯಿಂದ ೯ ವರ್ಷಗಳಿಂದ ಲೈನ್ ಮನೆಗಳಲ್ಲಿ ವಾಸ ಮಾಡುವ ಪ.ಜಾತಿ, ಪಂಗಡದ ಕುಟುಂಬಗಳಿಗೆ ನಿವೇಶನ ಮತ್ತು ಮನೆ ಕೊಡುವಂತೆ ಹೋರಾಟ ಮಾಡಿಕೊಂಡು ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ.
ಲೈನ್ ಮನೆಗಳಲ್ಲಿ ವಾಸ ಮಾಡುವ ಜನರಿಗೆ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ, ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ. ಸಾಮಾಜಿಕ ತಿಳುವಳಿಕೆಯ ಕೊರತೆಯಿದೆ.
ಇತ್ತೀಚೆಗೆ ಸರ್ಕಾರವು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡ ಮಾಲೀಕರಿಗೆ ಜಾಗವನ್ನು ಭೋಗ್ಯ ಕೊಡುವುದಾಗಿ ಹೇಳಿರುವುದನ್ನು ನಮ್ಮ ಸಂಘಟನೆ ಮತ್ತು ಭಾರತ ಕಮ್ಯೂನಿಷ್ಟ್ ಪಕ್ಷ ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದ ಅವರು ಹಲವು ಕಡೆ ದಲಿತರಿಗೆ ಮೀಸಲಿರಿಸಿದ ಸರ್ಕಾರಿ ಭೂಮಿಯು ಭೂ ಮಾಲೀಕರ ಪಾಲಾಗುತ್ತಿದೆ.
ಸರ್ಕಾರವು ಇದನ್ನು ತೆರವುಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಒತ್ತುವರಿಯನ್ನು ತೆರವುಗೊಳಿಸುವಂತೆ ಈ ತನಕ ಜಿಲ್ಲೆಯ ಅನೇಕ ಸಂಘಟನೆಗಳು ಹೋರಾಟ ಮಾಡಿಕೊಂಡು ಬಂದಿವೆ. ಜಿಲ್ಲಾಡಳಿತ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಪ್ರತಿಭಟನೆ ಅನಿವಾರ್ಯ ಎಂದರು.
ಪ್ರತಿಭಟನಾ ವೇಳೆ ರಾಜ್ಯ ಸಮಿತಿಯ ಸದಸ್ಯೆ ಬಿ.ಕೆ. ಶಾಂತಿ, ಜಿಲ್ಲಾಮಟ್ಟದ ಪದಾಧಿಕಾರಿಗಳಾದ ಪಿ.ಕೆ. ಗಣೇಶ್, ಕೆ.ಆರ್. ಬೇಬಿ ಸೇರಿದಂತೆ ಇನ್ನಿತರರು ಹಾಜರಿದ್ದರು.