ಗ್ರೀಕ್ ತತ್ವಜ್ಞಾನಿ ಸಾಕ್ರಟೀಸ್‌ನ ಮಾತು "Souಟಿಜ miಟಿಜ iಟಿ ಚಿ souಟಿಜ boಜಥಿ" (ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ). ಆರೋಗ್ಯವೆಂಬುದು ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಸಂಬAಧಿಸಿದ್ದು ಎನ್ನುವುದನ್ನು ಸಾಕ್ರಟೀಸನ ಈ ಮಾತು ಅನನ್ಯ ರೀತಿಯಲ್ಲಿ ಬಣ್ಣಿಸಿದೆ. ದೇಹ ಮತ್ತು ಮನಸ್ಸು ಎರಡನ್ನೂ ಸಮತೋಲನ ದಲ್ಲಿಡುವ ಬಿಗಿಯಾದ ಬಂಧವೇ ಯೋಗವಿದ್ಯೆ. ಶಿಕ್ಷಣದ ಮೂಲ ಮಂತ್ರ ವ್ಯಕ್ತಿತ್ವ ವಿಕಸನ. ಇದನ್ನು ಯೋಗ ವಿದ್ಯೆಯಿಂದ ಮಾತ್ರ ಪಡೆಯಲು ಸಾಧ್ಯ. ಯೋಗ ವಿಜ್ಞಾನ ನಮ್ಮ ಭರತಖಂಡದ ಹೆಮ್ಮೆ. ಪ್ರಪಂಚದ ಅತಿ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾದ ನಮ್ಮ ಹರಪ್ಪ ಮತ್ತು ಮೊಹೆಂಜೊದಾರೋ ನಾಗರಿಕತೆಯ ಭೂ ಉತ್ಖನನದ ಸಂದರ್ಭದಲ್ಲಿ ಸಿಕ್ಕ ಯೋಗಭಂಗಿಗಳ ಶಿಲ್ಪಗಳು ನಮ್ಮ ದೇಶದಲ್ಲಿ ಯೋಗದ ಪ್ರಾಚೀನತೆಗೆ ಸಾಕ್ಷಿ.
ಪತಂಜಲಿ ಮಹರ್ಷಿಗಳಿಂದ ಪ್ರಣೀತವಾದ ಯೋಗ ಸೂತ್ರಗಳು ಸುಮಾರು ಎರಡು ಸಾವಿರದ ನಾಲ್ಕು ನೂರು ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿದ್ದುವು. ಕಾಲಾನಂತರ ವಿದೇಶಿಯರ ಧಾಳಿಗೆ ತುತ್ತಾಗಿ ಗುರುಕುಲ ಪದ್ಧತಿಯ ಅವನತಿ ಯೊಂದಿಗೆ ಯೋಗವೂ ಅಳಿವಿನ ಅಂಚನ್ನು ತಲುಪಿತು. ಕ್ರಮೇಣ ೨೦ನೇ ಶತಮಾನದಲ್ಲಿ ಇದಕ್ಕೆ ಪುನರ್ಜೀವ ನೀಡಿದ್ದು ದಕ್ಷಿಣ ಭಾರತದ ಯೋಗಗುರು ಶ್ರೀ ತಿರುಮಲೈ ಕೃಷ್ಣಮಾಚಾರ್ಯರು.
‘ಯೋಗ' ಎಂದರೆ ಸೇರಿಸುವುದು, ಸಂಧಿಸುವುದು, ಕೂಡಿಸುವುದು ಎಂದರ್ಥ. ಯೋಗವು ದೇಹ ಹಾಗೂ ಮನಸ್ಸುಗಳನ್ನು ಬೆಸೆಯುವ ಒಂದು ಅಧ್ಯಾತ್ಮಿಕ ಪ್ರಕ್ರಿಯೆ.
ಭಾರತದ ಪುಣ್ಯಭೂಮಿಯಲ್ಲಿ ಹುಟ್ಟಿದ ಈ ವಿದ್ಯೆ ಇಂದು ಜಾಗತಿಕ ವಲಯದಲ್ಲಿ ದೇಶ, ಭಾಷೆ, ಧರ್ಮ, ಲಿಂಗ ಭೇದಗಳನ್ನೂ ಮೀರಿ ಸಾರ್ವತ್ರಿಕವಾಗಿ ಸ್ವೀಕಾರ ವಾಗಿರುವುದು ಇದರ ಶ್ರೇಷ್ಠತೆಗೆ ಸಾಕ್ಷಿ. ಆರೋಗ್ಯದ ಜೊತೆಗೆ ಅಧ್ಯಾತ್ಮಿಕ ಬಲವನ್ನು ಹೊಂದಲು ಪೂರಕ ವಾಗಿರುವ ಯೋಗ ಶಿಕ್ಷಣವನ್ನು ಜಗತ್ತಿಗೇ ಪರಿಚಯಿಸುವ ನಿಟ್ಟಿನಲ್ಲಿ ವರ್ಷದ ದೀರ್ಘ ಹಗಲಿನ ದಿನ ಜೂನ್ ೨೧ನ್ನು ಯೋಗ ದಿನಾಚರಣೆಗೆ ಸೂಕ್ತ ದಿನವನ್ನಾಗಿ ಆಯ್ಕೆ ಮಾಡಿ ವಿಶ್ವ ಸಂಸ್ಥೆ ತನ್ನ ೧೭೭ ಸದಸ್ಯ ರಾಷ್ಟçಗಳ ಒಪ್ಪಿಗೆಯೊಂದಿಗೆ ೨೦೧೫ ರಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಿತು. ನಿಜಕ್ಕೂ ಇದು ಭಾರತೀಯ ಪಾರಂಪರಿಕ ವಿದ್ಯೆಗೆ ಸಿಕ್ಕ ಮೌಲಿಕ ಗೆಲುವು.
ಮನುಷ್ಯನ ದೇಹ ಮತ್ತು ಮನಸ್ಸು ಬಂಡಿಯ ಎರಡು ಚಕ್ರಗಳಿದ್ದಂತೆ. ಅವು ಸಮತೋಲನ ಕಾಯ್ದು ಕೊಂಡಾಗ ಮಾತ್ರ ಪ್ರಯಾಣ ಸುಸೂತ್ರ. ಇದು ಸಾಧ್ಯವಾಗುವುದು ಯೋಗದ ಮೂಲಕ. ವ್ಯಕ್ತಿಯು ತನ್ನ ಉನ್ನತಿಗಾಗಿ ಹೊರಗಿನ ಪ್ರೇರಣೆಗೆ ಕಾಯುತ್ತಾನೆ. ಆದರೆ ತನ್ನ ಅಂತಃಶಕ್ತಿಯ ಅರಿವು ಅವನಿಗೆ ಇರುವುದಿಲ್ಲ. ಆ ಅರಿವನ್ನು ಮೂಡಿಸಿ ಅವನ ಸಫಲತೆ ಮತ್ತು ಶ್ರೇಯಸ್ಸಿಗೆ ದಾರಿ ತೋರಲು ಆತ್ಮಗುರುವಿನ ಸ್ಥಾನವನ್ನು ಯೋಗ ಗಳಿಸಿಕೊಂಡಿದೆ. ಈ ಸಫಲತೆಯನ್ನು ಸಾಧಿಸಲು ನಿರಂತರ ಸಾಧನೆ, ಶ್ರದ್ಧೆ, ತಾಳ್ಮೆ ಮತ್ತು ಸಮಾಧಾನಕರ ಮನಃಸ್ಥಿತಿ ಅತ್ಯಂತ ಮುಖ್ಯವಾದುದು.
ಇಂದಿನ ನಮ್ಮ ಒತ್ತಡದ ಜೀವನಶೈಲಿಗೆ ಯೋಗ ಶಾಶ್ವತ ಪರಿಹಾರ ಒದಗಿಸಬಲ್ಲುದು. ಯೋಗದ ಮಹತ್ವವನ್ನು ಮನಗಂಡು ನಮ್ಮ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಯೋಗವನ್ನು ಕಲಿಕೆಯ ಅವಿಭಾಜ್ಯ ಅಂಗವಾಗಿ ಸೇರ್ಪಡೆಗೊಳಿಸಲಾಗಿದೆ. ಇಂದಿನ ಜಗತ್ತಿನಲ್ಲಿ ನಾವು ಎಣಿಸಿದ್ದು, ಬಯಸಿದ್ದು ಹೆಚ್ಚು ಪ್ರಯತ್ನವಿಲ್ಲದೆ ಸಿಗಬಹುದು.
ಆದರೆ ಆರೋಗ್ಯದ ವಿಚಾರಕ್ಕೆ ಬಂದಾಗ ನಮ್ಮ ಮನೋ ಸಂಬAಧೀ ಸಮಸ್ಯೆಗಳ ಪರಿಹಾರಕ್ಕೆ ಎಷ್ಟು ಒದ್ದಾಡಿದರೂ ಕೊನೆಗೆ ನಾವು ಶರಣಾಗುವುದು ನಮ್ಮ ಪಾರಂಪರಿಕ ಪದ್ಧತಿಗೆ. ಯೋಗ ಕೇವಲ ಮೇಲ್ನೋಟಕ್ಕೆ ಕಾಯಿಲೆಯನ್ನು ಗುಣಪಡಿಸುವ ಸಾಧನವಲ್ಲ. ಅದು ಮನಸ್ಸನ್ನು ಸದೃಢಗೊಳಿಸಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವ ಕೆಲಸವನ್ನು ಮಾಡುತ್ತದೆ.
ಕಾಮ, ಕ್ರೋಧ, ಲೋಭ ಮೋಹ, ಮದ ಮತ್ತು ಮತ್ಸರ ಇವು ಮನುಷ್ಯನಿಗೆ ಸ್ವಭಾವ ಸಹಜವಾದ ಆರು ಶತ್ರುಗಳು. ಇವುಗಳ ಏರು ಪೇರಿನಿಂದಾಗಿ ಮನುಷ್ಯ ಪ್ರಕ್ಷುಬ್ಧ ನಾಗುತ್ತಾನೆ. ಈ ಮಾನಸಿಕ ಪ್ರಕ್ಷುಬ್ಧತೆಯ ನಿಯಂತ್ರಣಕ್ಕೆ ಇರುವ ಏಕೈಕ ಕೀಲಿಕೈ ಯೋಗಾಭ್ಯಾಸ. ಅನಿರೀಕ್ಷಿತವಾಗಿ ಆಕಸ್ಮಿಕ ಆತಂಕ ಗಳನ್ನು ಎದುರಿಸುವ ಸಂದರ್ಭಗಳಲ್ಲಿ ನಮ್ಮ ಮನಸ್ಸು ಮತ್ತು ದೇಹ ಪೂರಕವಾಗಿ ಸ್ಪಂದಿಸಬೇಕಾದರೆ ದೃಢತೆಯನ್ನು ನಾವು ಸಿದ್ಧಿಸಿಕೊಳ್ಳಬೇಕು. ದಿನದ ೨೪ ಗಂಟೆಯಲ್ಲಿ ಒಂದು ಗಂಟೆಯನ್ನು ನಾವು ಯೋಗಾಭ್ಯಾಸಕ್ಕೆ ಮೀಸಲಿರಿಸಿದರೂ ಸಾಕು ಅದರ ಧನಾತ್ಮಕ ಪರಿಣಾಮವನ್ನು ದಿನದ ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ನಾವು ಗುರುತಿಸಲು ಸಾಧ್ಯ. ನಾವು ಯೋಜಿಸುವ ಕಾರ್ಯಗಳನ್ನು ಸಾಧಿಸಲು ದೇಹವನ್ನು ಅಷ್ಟೇ ಸುಸ್ಥಿತಿಯಲ್ಲಿಡಬೇಕಾಗುತ್ತದೆ. ಅತಿ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವು ಸಮಚಿತ್ತತೆಯನ್ನು ಕಾಯ್ದು ಕೊಳ್ಳಬೇಕಾಗುತ್ತದೆ. ಇವುಗಳಿಗೆಲ್ಲ ನಮಗೆ ನೆರವಾಗುವುದು ಯೋಗ. ಮಕ್ಕಳ ಸರ್ವತೋಮುಖ ಬೆಳವಣಿಗೆಗಂತೂ ಯೋಗವೇ ಪ್ರಮುಖ ಆಧಾರ.
ಹಿತ್ತಲಗಿಡ ಮದ್ದಲ್ಲ ಎಂದು ನಾವು ತಿಳಿಯುವ ಕಾಲ ಕಳೆದುಹೋಗಿದೆ. ಶ್ರೇಷ್ಠ ಸಂಸ್ಕೃತಿ, ಆಚಾರ ವಿಚಾರ ಮತ್ತು ಪರಂಪರೆಗೆ ನಮ್ಮ ದೇಶಕ್ಕೆ ಪೂಜನೀಯ ಸ್ಥಾನ. ಇದನ್ನು ನಾವು ನಮ್ಮ ಜೀವನ ಶೈಲಿಯೊಂದಿಗೆ ಅನುಸರಿಸಿದ್ದೇ ಆದಲ್ಲಿ ಸ್ವಾಮಿ ವಿವೇಕಾನಂದರ ಯುವಶಕ್ತಿಯ ರಾಷ್ಟç ನಿರ್ಮಾಣದ ಕನಸು ಸಾಕಾರಗೊಳ್ಳುವ ದಿನ ದೂರವಿಲ್ಲ. ಯೋಗದ ಮೂಲಾರ್ಥ ಬೆಸೆಯುವುದು.
ದೇಹ ಮತ್ತು ಮನಸ್ಸಿನ ಬೆಸುಗೆ; ಜೊತೆಗೆ ಯೋಗ ವಿದ್ಯೆಯು ಭಾರತವನ್ನು ಇತರ ರಾಷ್ಟçಗಳೊಂದಿಗೆ ಆರೋಗ್ಯಪೂರ್ಣ ಬಾಂಧವ್ಯಕ್ಕಾಗಿ ಕೂಡಿಸುವ ಕೊಂಡಿಯಾಗಿ ರೂಪುಗೊಳ್ಳುತ್ತಿದೆ. "ವಸುಧೈವ ಕುಟುಂಬಕA" ಇದು ಭಾರತೀಯ ಸಂಸ್ಕೃತಿಯ ಆದರ್ಶ. ಈ ವಿಶ್ವ ಕುಟುಂಬ ತತ್ವಕ್ಕೆ ಬದ್ಧವಾಗಿ ‘ವಿಶ್ವದ ಆರೋಗ್ಯಕ್ಕಾಗಿ ಯೋಗ' ಎಂಬ ಕನಸು ಮತ್ತು ಆದರ್ಶ ವನ್ನು ಸಾಕಾರ ಗೊಳಿಸಲು ನಾವೆಲ್ಲರೂ ಸಜ್ಜಾಗೋಣ.
- ಪ್ರತಿಮಾ ಹರೀಶ್ ರೈ, ಉಪನ್ಯಾಸಕರು, ಸೈಂಟ್ ಆನ್ಸ್ ಪದವಿ ಕಾಲೇಜು, ವೀರಾಜಪೇಟೆ.