ಮಡಿಕೇರಿ, ಜೂ. ೧೮: ಕೊಡವಾಮೆ ಆಶ್ರಯದಲ್ಲಿರುವ ಬುಡಕಟ್ಟ್ ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ತಾ. ೨೫ ರಂದು ಗೋಣಿಕೊಪ್ಪ ಕಾವೇರಿ ಕಾಲೇಜು ಸಭಾಂಗಣದಲ್ಲಿ ಕೊಡವ ಭಾಷೆ ಕುರಿತಾಗಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಬುಡಕಟ್ಟ್ ಸಂಸ್ಕೃತಿ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಮಚ್ಚಮಾಡ ಲಾಲಕುಟ್ಟಪ್ಪ ಹಾಗೂ ಕೊಡವಾಮೆ ಟ್ರಸ್ಟಿ ಉದಿಯಂಡ ರೋಷನ್ ಸೋಮಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿಚಾರ ಸಂಕಿರಣದಲ್ಲಿ ಬಾಚರಣಿಯಂಡ ಅಪ್ಪಣ್ಣ, ಬೊವ್ವೇರಿಯಂಡ ಸಿ. ಉತ್ತಯ್ಯ, ಅಜ್ಜಿನಿಕಂಡ ಮಹೇಶ್ ನಾಚಯ್ಯ ಇವರುಗಳು ಕೊಡವ ಭಾಷೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಕೊಡವ ಚರಿತ್ರೆ, ಕಲೆ, ಸಂಸ್ಕೃತಿ ಮುಂತಾದ ವಿಷÀಯಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚಿಂತಿಸಲಾಗಿದೆ. ಭಾಷೆ, ಕಲೆ, ಸಂಸ್ಕೃತಿ ಮೊದಲಾದ ವಿಷಯಗಳ ಬಗ್ಗೆ ಬೋಧನಾ ತರಗತಿ ಹಾಗೂ ಪ್ರಾಯೋಗಿಕ ತರಗತಿಗಳನ್ನು ನಡೆಸುವ ಯೋಜನೆಯೂ ಇದೆ. ಈಗಾಗಲೇ ಪ್ರಕಟಗೊಂಡಿರುವ ‘ಕೊಡವ ಅರಿವೋಲೆ’ ಎಂಬ ಕೊಡವ-ಇಂಗ್ಲೀಷ್ ಕನ್ನಡ ನಿಘಂಟಿನ ಪರಿಷ್ಕೃತ ಆವೃತ್ತಿಯನ್ನು ಹೊರ ತರುವುದರ ಜೊತೆಗೆ ಕೊಡವ ಭಾಷೆ ಮತ್ತು ಸಂಸ್ಕೃತಿಯ ಪೂರ್ಣ ವಿವರವುಳ್ಳ ಸಂಗ್ರಹ ಗ್ರಂಥವನ್ನೂ ಕೂಡ ಪ್ರಕಟಿಸುವ ಯೋಜನೆಗಳಿವೆ ಎಂದು ಅವರುಗಳು ಮಾಹಿತಿಯಿತ್ತರು.

ಸಾಮಾಜಿಕ-ಸಂಸ್ಕೃತಿ ಮತ್ತು ಹಿತರಕ್ಷಣಾ ಚಟುವಟಿಕೆಗಳ ಮೂಲಕ ಕೊಡವರ ಹಿತ ಕಾಪಾಡುವ ಉದ್ದೇಶದೊಂದಿಗೆ ಕೊಡವಾಮೆ ಟ್ರಸ್ಟ್ ೨೦೧೦ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದು ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಯಾವುದೇ ಶುಲ್ಕವಿಲ್ಲದೆ ಮುಕ್ತವಾಗಿ ಇದರ ಸದಸ್ಯತ್ವ ಪಡೆಯಬಹುದಾಗಿದೆ. ಉಪನ್ಯಾಸದಲ್ಲಿ ಪಾಲ್ಗೊಳ್ಳುವವರು ಹೆಚ್ಚಿನ ಮಾಹಿತಿಗೆ ೮೮೮೪೪೮೪೦೮೪ ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ ಎಂದು ರೋಷನ್ ಸೋಮಣ್ಣ ಹಾಗೂ ಲಾಲಕುಟ್ಟಪ್ಪ ಹೇಳಿದರು.