ಸೋಮವಾರಪೇಟೆ, ಜೂ. ೧೮: ಭಾರತ್ ಸ್ಕೌಟ್ ಮತ್ತು ಗೈಡ್ಸ್ನ್ನು ಪ್ರತಿ ಶಾಲೆಗಳಲ್ಲಿ ಪರಿಣಾಮಕಾರಿ ಯಾಗಿ ಅನುಷ್ಠಾನಗೊಳ್ಳಲು ಶಿಕ್ಷಣ ಇಲಾಖೆ ಸಜ್ಜಾಗಿದ್ದು, ಇದಕ್ಕೆ ಶಿಕ್ಷಕರು ಕೈಜೋಡಿಸ ಬೇಕಿದೆ ಎಂದು ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ ಹೇಳಿದರು.

ಇಲ್ಲಿನ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿಯ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಹಿಂದೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ನಡೆಯುತ್ತಿದ್ದ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನಕ್ಕೆ ತಂದು ಆ ಮೂಲಕ ಸಂಸ್ಥೆಯ ಸೇವಾ ಕಾರ್ಯಕ್ಕೆ ಪ್ರೇರಣೆ ನೀಡುತ್ತಿದೆ ಎಂದರು.

ಇದೀಗ ಪ್ರತಿ ಶಾಲಾ ಕಾಲೇಜು ಗಳಲ್ಲಿಯೂ ಸ್ಕೌಟ್ಸ್, ಗೈಡ್ಸ್, ಕಬ್, ಬುಲ್‌ಬುಲ್, ರೇಂರ‍್ಸ್ ಮತ್ತು ರೋರ‍್ಸ್ ದಳಗಳನ್ನು ಕಡ್ಡಾಯವಾಗಿ ಆರಂಭಿಸುವAತೆ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ರತಿ ಶಾಲೆಗಳಲ್ಲೂ ತರಬೇತಿ ಪಡೆದ ಶಿಕ್ಷಕರುಗಳು ದಳಗಳನ್ನು ರಚಿಸಿ, ಆ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ಸನ್ನಡತೆ, ಸೇವಾ ಮನೋಭಾವನೆಗಳು ಮೈಗೂಡುವಂತೆ ಮಾಡಬೇಕೆಂದು ಕರೆ ನೀಡಿದರು. ತಾಲೂಕು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಜಿ.ಎಂ. ಹೇಮಂತ್‌ಕುಮಾರ್ ಮಾತನಾಡಿ, ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯು ತನ್ನ ಸೇವೆಯ ಮೂಲಕ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪಾಲನೆ, ಪರಸ್ಪರ ಸಹಕಾರ, ಪರಿಸರ ಪ್ರಜ್ಞೆ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸುವ ಕಾರ್ಯ ಮಾಡುತ್ತಿದೆ ಎಂದು ಅಭಿಪ್ರಾಯಿಸಿದರು.

ಅಧ್ಯಕ್ಷತೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ತಾಲೂಕು ಸಂಸ್ಥೆ ಅಧ್ಯಕ್ಷ ಬಿ.ಎ. ಭಾಸ್ಕರ್ ವಹಿಸಿದ್ದರು. ಕಾರ್ಯದರ್ಶಿ ಟಿ.ಎಸ್. ಚಂದ್ರಶೇಖರ್ ಲೆಕ್ಕಪತ್ರ ಮಂಡಿಸಿದರು. ಗೈಡ್ಸ್ ಕ್ಯಾಪ್ಟನ್ ಅನುಸೂಯ ವರದಿ ವಾಚಿಸಿದರು. ಜಿಲ್ಲಾ ಸಂಘಟಕಿ ಯು.ಸಿ. ದಮಯಂತಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.

ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಪ್ರಮಾಣ ಪತ್ರಗಳನ್ನು ಶಿಕ್ಷಕರುಗಳಿಗೆ ಹಸ್ತಾಂತರಿಸಲಾಯಿತು. ಜಿಲ್ಲಾ ಪ್ರಧಾನ ಆಯುಕ್ತರಾಗಿ ಮರುನೇಮಕವಾದ ಕೆ.ಟಿ. ಬೇಬಿ ಮ್ಯಾಥ್ಯೂ ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಜಿ.ಎಂ. ಹೇಮಂತ್‌ಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ ಜಿಲ್ಲಾ ಉಪಾಧ್ಯಕ್ಷೆ ರಾಣಿ ಮಾಚಯ್ಯ, ಸ್ಥಾನಿಕ ಆಯುಕ್ತ ಹೆಚ್.ಆರ್. ಮುತ್ತಪ್ಪ, ತಾಲೂಕು ಸಂಸ್ಥೆಯ ಪದಾಧಿಕಾರಿ ಸುಮಾ ಸುದೀಪ್, ಖಜಾಂಚಿ ಕೆ.ಟಿ. ಚಂದ್ರಕಲಾ ಇದ್ದರು.