ಸೋಮವಾರಪೇಟೆ, ಜೂ. ೧೮: ಐತಿಹಾಸಿಕ ಹಿನ್ನೆಲೆ ಹೊಂದಿರುವ, ಸೋಮವಾರಪೇಟೆ ಭಾಗದ ಪ್ರಧಾನ ದೇವಾಲಯ ಎಂದೇ ಪರಿಗಣಿ ಸಲ್ಪಟ್ಟಿರುವ ಹಾನಗಲ್ಲು ಗ್ರಾಮದ ದುದ್ದುಗಲ್ಲು ಶ್ರೀ ಮಲ್ಲಿಕಾರ್ಜುನ ದೇವಾಲಯ ಪುನರ್‌ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಆದಿಚುಂಚನಗಿರಿ ಮಠಾಧೀಶ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ರೂ. ೩ ಕೋಟಿ ವೆಚ್ಚದ ಯೋಜನೆಯೊಂದಿಗೆ ಪ್ರಗತಿಯಲ್ಲಿರುವ ದೇವಾಲಯ ಕಾಮಗಾರಿಯನ್ನು ಪರಿಶೀಲಿಸಿದ ಶ್ರೀಗಳು, ಮುಂದಿನ ಶಿವರಾತ್ರಿಯೊಳಗೆ ಗರ್ಭಗುಡಿ ನಿರ್ಮಾಣ ಕಾರ್ಯ ಪೂರ್ಣ ಗೊಳಿಸಿ, ಅದ್ಧೂರಿಯಾಗಿ ಶಿವರಾತ್ರಿ ಮಹೋತ್ಸವ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸುಮಾರು ೬೮ ಎಕರೆ ಪ್ರದೇಶವನ್ನು ಹೊಂದಿರುವ, ಪ್ರಕೃತಿ ಸೌಂದರ್ಯದ ನಡುವೆ ಜುಳುಜುಳು ಹರಿಯುವ ಹೊಳೆ ದಂಡೆಯ ಮೇಲ್ಭಾಗದಲ್ಲಿ ನೂತನ ದೇವಾಲಯ ನಿರ್ಮಾಣವಾಗಲಿದ್ದು, ನೂರಾರು ವರ್ಷಗಳ ಹಿಂದೆ ನಿರ್ಮಾಣಗೊಂಡು ನಂತರ ಶಿಥಿಲಾವಸ್ಥೆಗೆ ತಲುಪಿರುವ ಹಳೆಯ ದೇವಾಲಯವನ್ನು ತೆರವುಗೊಳಿಸಿ, ನೂತನ ದೇವಾಲಯ ನಿರ್ಮಿಸಲಾಗುತ್ತಿದೆ ಎಂದು ಸ್ವಾಮೀಜಿಗಳು ಹೇಳಿದರು.

ಆದಿ ಚುಂಚನಗಿರಿ ಮಠದ ಉಸ್ತುವಾರಿಯಲ್ಲಿ, ಗ್ರಾಮಸ್ಥರನ್ನು ಒಳಗೊಂಡ ಟ್ರಸ್ಟ್ ರಚನೆ ಮಾಡಲಾಗಿದ್ದು, ಸಮಾಜದ ದಾನಿಗಳ ಸಹಕಾರದಿಂದ ಶ್ರೀ ಮಲ್ಲಿಕಾರ್ಜುನ ದೇವಾಲಯ, ಗರ್ಭಗುಡಿ, ಪ್ರಾಂಗಣ, ಪ್ರಾಕಾರ, ಕಲ್ಯಾಣಿ, ಹೊಳೆಯಿಂದ ದೇವಾಲಯದವರೆಗೆ ೧೦೮ ಮೆಟ್ಟಿಲು, ಆವರಣ ಗೋಡೆ ಸೇರಿದಂತೆ ಇತರ ಕೆಲಸ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು. ಈ ಸಂದರ್ಭ ಉಪಸ್ಥಿತರಿದ್ದ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷರು ಹಾಗೂ ಉದ್ಯಮಿಗಳೂ ಆಗಿರುವ ಹರಪಳ್ಳಿ ರವೀಂದ್ರ ಅವರು, ಮಲ್ಲಿಕಾರ್ಜುನ ದೇವಾಲಯ ನಿರ್ಮಾಣಕ್ಕೆ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಘೋಷಿಸಿದರು. ಸೋಮವಾರ ಪೇಟೆ ಭಾಗದ ಹಲವಷ್ಟು ದೇವಾಲಯ ಗಳ ಪೈಕಿ ದುದ್ದುಗಲ್ಲು ಶ್ರೀ ಮಲ್ಲಿಕಾರ್ಜುನ ದೇವಾಲಯ ಈ ವ್ಯಾಪ್ತಿಯ ಪ್ರಧಾನ ದೇವಾಲಯ ವಾಗಿದ್ದು, ಹಲವಷ್ಟು ಅಷ್ಟಮಂಗಲ ಪ್ರಶ್ನೆಗಳಲ್ಲೂ ಇದು ಕಂಡುಬAದಿದೆ. ಈ ಹಿನ್ನೆಲೆ ಆದಿಚುಂಚನಗಿರಿ ಮಠದ ಮೂಲಕ ದೇವಾಲಯವನ್ನು ಪುನರ್ ನಿರ್ಮಿಸಲು ಮುಂದಾಗಿದ್ದೇವೆ ಎಂದು ಟ್ರಸ್ಟ್ನ ರಾಜುಪೊನ್ನಪ್ಪ, ಹೆಚ್.ಎಂ. ಬಸಪ್ಪ ಅವರುಗಳು ತಿಳಿಸಿದರು.

ಈ ಸಂದರ್ಭ ಆದಿಚುಂಚನಗಿರಿ ಹಾಸನ ಶಾಖಾ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ, ಸೋಮವಾರಪೇಟೆ ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಹಾನಗಲ್ಲು ಗ್ರಾಮಾಧ್ಯಕ್ಷ ವಿಕ್ರಾಂತ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.