ಒಂದು ಮಗುವಿನ ಜೀವನದಲ್ಲಿ ತಂದೆಯ ಪಾತ್ರವನ್ನು ಬೇರೆ ಯಾರೂ ನಿಭಾಯಿಸಲಾರರು. ನಮ್ಮ ಜೀವನದಲ್ಲಿ ಯಾವಾಗಲೂ ಸ್ಥಿರವಾಗಿರುವ ವ್ಯಕ್ತಿ, ನಮ್ಮ ಒಳ್ಳೆಯ ಮತ್ತು ಕೆಟ್ಟ ಕಾಲದಲ್ಲಿ ನಮಗೆ ಬೆಂಬಲ ನೀಡುವ ಮತ್ತು ಸರಿಯಾದ ಹಾದಿಯಲ್ಲಿ ನಮಗೆ ಮಾರ್ಗದರ್ಶನ ನೀಡುವವರೇ ನಮ್ಮ ತಂದೆ. ಅವರು ಯಾವಾಗಲೂ ನಮ್ಮನ್ನು ಪ್ರೋತ್ಸಾಹಿಸುತ್ತಾರೆ ಮತ್ತು ನಮ್ಮ ಎಲ್ಲ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ.

ಕುಟುಂಬವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಮತ್ತು ಜೀವನದ ಎಲ್ಲ ಹಂತಗಳಲ್ಲಿ ನಮ್ಮನ್ನು ಬೆಂಬಲಿಸುವ ಕುಟುಂಬದ ಆಧಾರಸ್ತಂಭ. ನಮ್ಮ ಕನಸುಗಳನ್ನು ಯಶಸ್ವಿಗೊಳಿಸುವ ಅವರು ಮಾಡಿದ ತ್ಯಾಗಕ್ಕೆ ನಾವು ಅವರಿಗೆ ಸದಾ ಋಣಿಯಾಗಿರ ಬೇಕು. ಜೂನ್ ೧೯, ೧೯೧೦ ರಂದು ಅಮೇರಿಕಾದ ವಾಷಿಂಗ್ಟನ್‌ನಲ್ಲಿ ಮೊದಲ ಬಾರಿಗೆ ಅಪ್ಪಂದಿರ ದಿನವನ್ನು ಆಚರಿಸಲಾಯಿತು. ಒಬ್ಬ ತಂದೆ ತನ್ನ ಮಗುವಿನ ಭವಿಷ್ಯವನ್ನು ರೂಪಿಸುವಲ್ಲಿ ತನ್ನ ಇಡೀ ಜೀವನವನ್ನು ಕಳೆಯುತ್ತಾನೆ. ಬದುಕಿನ ಪಾಠವ ಕಲಿಸುವ, ಆಟವ ಆಡಿಸುವ ಜೀವದ ಗೆಳೆಯ ಅಪ್ಪ. ಅಮ್ಮನಿಗೆ ಹಣೆಯ ಸಿಂಧೂರವಿಟ್ಟ, ಅಮ್ಮನಿಗೆ ಮಾಂಗಲ್ಯ ಕಟ್ಟಿ, ಅಮ್ಮನಿಗೆ ಬಾಳುಕೊಟ್ಟ ಅಪ್ಪ. ನಮಗೆ ಪ್ರೀತಿಯ ಬದುಕು ಕಟ್ಟಿಕೊಟ್ಟ ಅಪ್ಪ. ಮಗುವನ್ನು ಜೀವನಪೂರ್ತಿ ಹೆಗಲ ಮೇಲೆ ಹೊತ್ತು ಆ ಜನ್ಮಕ್ಕೆ ಅರ್ಥ ಕೊಟ್ಟವನು. ಅಪ್ಪ ತಮ್ಮ ಎಲ್ಲ ಕರ್ತವ್ಯಗಳನ್ನು ಪೂರೈಸಲು ಮತ್ತು ಕುಟುಂಬದ ಪಾಲನೆ - ಪೋಷಣೆ ಮಾಡಲು ಕಷ್ಟಪಟ್ಟು ಹಣ ಸಂಪಾದಿಸುತ್ತಾರೆ. ನಮಗೆ ಅವಶ್ಯವಿರುವುದನ್ನು ತಂದುಕೊಡುತ್ತಾರೆ. ಇದನ್ನೆಲ್ಲ ಮಾಡುವಾಗ ಅವರು ತಮಗಿಂತ ಹೆಚ್ಚಾಗಿ ನಮ್ಮ ವಿಚಾರವನ್ನೇ ಮಾಡುತ್ತಾರೆ.

ಪ್ರತಿಯೊಬ್ಬರ ಜೀವನದಲ್ಲಿ ತಂದೆ ಪ್ರಮುಖ ಪಾತ್ರ ವಹಿಸುತ್ತಾರೆ. ಇಡೀ ಕುಟುಂಬವು ಒಬ್ಬ ತಂದೆಯ ಹೆಗಲ ಮೇಲೆ ನಿಂತಿದೆ. ನಡವಳಿಕೆ ಮತ್ತು ನೀತಿಶಾಸ್ತçದ ಬಗ್ಗೆ ಅವರು ನಮಗೆ ತಿಳಿಸುತ್ತಾರೆ. ಜೀವನದಲ್ಲಿ ತಂದೆ ನಮಗೆ ಮಾರ್ಗದರ್ಶನ ನೀಡುತ್ತಾರೆ. ನಾವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಾರೆ. ತಂದೆ (ಅಪ್ಪ) ಜೀವನದ ನಾಯಕ.

ತಂದೆಯು ಕುಟುಂಬದ ಶಕ್ತಿಯ ಸ್ತಂಭವಾಗಿದ್ದು, ಜೀವನದ ಎಲ್ಲಾ ಸಂತೋಷದ ಮತ್ತು ಸವಾಲಿನ ಕ್ಷಣಗಳಲ್ಲಿ ಬಂಧವನ್ನು ಬಲವಾಗಿಸುತ್ತಾರೆ. ಅಪ್ಪ ಎಂದರೆ ಬೆಳಕು... ಅಪ್ಪನಿಂದಲೇ ಬದುಕು. ಅಪ್ಪ ಎನ್ನೋ ಪದಕ್ಕೆ ಸಾವಿರ ಆನೆಗಳ ಬಲ, ದರ್ಪ, ಕೋಪ, ಅತಿ ಎನ್ನಿಸುವ ಶಿಸ್ತು, ಅನುಮಾನ. ಇವೆಲ್ಲದರ ಸಮ್ಮಿಲನವೇ ಅಪ್ಪ. ಆತನಲ್ಲಿ ಅತೀವ ಒಲವಿದೆ. ನಮ್ಮೆಲ್ಲಾ ಬಯಕೆಗಳನ್ನು ತನ್ನ ಶಕ್ತಿಯನುಸಾರ ತುಂಬಿದವನು. ಮಕ್ಕಳ ಪಾಲಿಗೆ ಅಪ್ಪನೇ ಮೊದಲ ಹೀರೋ... ತೋರು ಬೆರಳು ಹಿಡಿದು ಸಂತೆಯಲ್ಲಿ ಜಗತ್ತನ್ನೇ ತೋರಿದವನು. ಅಪ್ಪ ಎಂದರೆ ಈಗಿನ ಮಕ್ಕಳಲ್ಲಿ ಭಯದ ಬದಲು ಮಂದಹಾಸ ಮೂಡುತ್ತದೆ. ಅಪ್ಪ ಬರೀ ಅಪ್ಪನಾಗಿಯೇ ಉಳಿಯದೇ ಸ್ನೇಹಿತನಾಗಿ, ಹಿತೈಷಿಯಾಗಿ ಬೆಳೆದಿದ್ದಾನೆ. ಎಷ್ಟೋ ಮನೆಗಳಲ್ಲಿ ಅಪ್ಪ... ಅಮ್ಮನ ಸ್ಥಾನ ತುಂಬುತ್ತಿದ್ದಾರೆ. ಇಂದಿನ ಬಹುತೇಕ ಮಕ್ಕಳಿಗೆ ಅಪ್ಪನ ಕೈಯಲ್ಲಿ ಏಟು ತಿಂದ ಅನುಭವವಿಲ್ಲ. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಅಪ್ಪನೂ ಕೂಡ ಬದಲಾಗಿದ್ದಾನೆ, ಬದಲಾಗುತ್ತಿದ್ದಾನೆ. ತಂದೆಯ ದಿನವನ್ನು ಸೊನೊರಾ ಸ್ಮಾರ್ಟ್ ಡಾಡ್ ಸ್ಥಾಪಿಸಿದರು. ಅಪ್ಪ ಹೆಣ್ಣು ಮಕ್ಕಳ ಪಾಲಿಗಂತೂ ಆತ ತುಸು ಜಾಸ್ತಿಯೇ ಪ್ರೀತಿಯನ್ನು ತೋರಿಸುತ್ತಾನೆ. ಅಪ್ಪ ಅನ್ನುವ ಬಂಧವೇ ಹಾಗೇ... ಅಪ್ಪ ಎಂದರೆ ಕೆಲವರಿಗೆ ಸಿಡುಕು, ಗಂಭೀರ ಮುಖ ನೆನಪಾದರೂ... ಹೆಗಲಿಗೇರಿಸಿಕೊಂಡು ನಡೆದ ಜೀವ ಅಂದರೆ ಅದು ಅಪ್ಪ. ಬೆಳೆಯುತ್ತಿದ್ದಂತೆ ಹೆಗಲ ಮೇಲೆ ಕೈ ಹಾಕಿಕೊಂಡು ನಡೆಯುವ ಸ್ನೇಹಿತ. ಅಪ್ಪ ಅನ್ನೋ ಜೀವ ಮಗುವಿಗೆ ಬಲ, ರಕ್ಷಣೆ ಒದಗಿಸುತ್ತದೆ. ಸದಾ ನಮಗಾಗಿ ಹೆಣಗಾಡುವ ಜೀವವೇ ಅಪ್ಪ.

- ಮುಕ್ಕಾಟಿ ಹರಿಣಿ ಗಿರೀಶ್, ಮರಗೋಡು, ಮೊ. ೮೯೭೧೩೫೧೨೩೫