ಗೋಣಿಕೊಪ್ಪಲು, ಜೂ. ೧೮: ಅಮ್ಮತ್ತಿ ಹೋಬಳಿಯ ಮಗ್ಗುಲ ಗ್ರಾಮದಲ್ಲಿ ಹುಲಿ ದಾಳಿ ನಡೆಸಿದ್ದು, ಸಾಬು ಅಯ್ಯಪ್ಪ ಎಂಬವರಿಗೆ ಸೇರಿದ ಕರು ಬಲಿಯಾಗಿದೆ. ಶನಿವಾರ ಸಂಜೆ ೫ ಗಂಟೆಯ ಸಮಯದಲ್ಲಿ ಹುಲಿಯು ಮನೆಯ ಮುಂಭಾಗದ ಭತ್ತದ ಗದ್ದೆಗೆ ಬಂದು ಮೇಯಲು ಬಿಟ್ಟಿದ್ದ ಕರುವಿನ ಮೇಲೆ ದಾಳಿ ನಡೆಸಿದೆ.
ಗದ್ದೆಯಲ್ಲಿ ಕರು ಕೂಗಿಕೊಂಡ ಸದ್ದು ಕೇಳಿ ಬಂದ ಸಂದರ್ಭ ಹುಲಿಯು ಕರುವಿನ ಕುತ್ತಿಗೆ ಭಾಗಕ್ಕೆ ಬಾಯಿ ಹಾಕಿ ಕೊಂದು ಹಾಕಿತ್ತು.
ಮನೆಯವರು ಜೋರಾಗಿ ಬೊಬ್ಬೆ ಹಾಕಿದಾಗ ಹುಲಿಯು ಕರುವನ್ನು ಬಿಟ್ಟು ಸಮೀಪದ ಕಾಫಿ ತೋಟದತ್ತ ಮರೆಯಾಗಿದೆ.
ಸುದ್ದಿ ತಿಳಿದ ಅರಣ್ಯ ಇಲಾಖೆಯ ವೀರಾಜಪೇಟೆ ವಿಭಾಗದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಹುಲಿಯ ಪತ್ತೆಗಾಗಿ ಎರಡು ಕ್ಯಾಮರಾಗಳನ್ನು ಅಳವಡಿಸಿ ತೆರಳಿದ್ದಾರೆ.
ಇದೀಗ ಹುಲಿಯ ಸಂಚಾರದಿAದ ಗ್ರಾಮದ ಜನರು ಗಾಭರಿಗೊಂಡಿದ್ದು ತಮ್ಮ ಜಾನುವಾರುಗಳ ರಕ್ಷಣೆಯ ಬಗ್ಗೆ ಚಿಂತೆಗೀಡಾಗಿದ್ದಾರೆ.
-ಹೆಚ್.ಕೆ. ಜಗದೀಶ್