ಚೆಟ್ಟಳ್ಳಿ, ಜೂ. ೧೭: ವೀರಾಜಪೇಟೆ ಸರ್ಕಾರಿ ಪ್ರಥಮ ಕಾಲೇಜು ರೋವರ್ಸ್ ಮತ್ತು ರೇಂಜರ್ಸ್ ಘಟಕ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ವೀರಾಜಪೇಟೆ, ಸ್ಥಳೀಯ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಬೇಟೋಳಿ ದೇವರ ಕಾಡು ಅರಣ್ಯ ಪ್ರದೇಶದಲ್ಲಿ ಕಾಡುಹಣ್ಣು ಬೀಜಗಳ ಬಿತ್ತನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪ್ರಧಾನ ಆಯುಕ್ತ ಬೇಬಿ ಮ್ಯಾಥ್ಯೂ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಪ್ರತಿಯೊಬ್ಬರೂ ಪರಿಸರ ನಮ್ಮದು ಎಂಬ ಭಾವನೆ ಬೆಳೆಸಿಕೊಂಡು ಪರಿಸರ ರಕ್ಷಣೆಗೆ ಮುಂದಾದರೆ ಮಾತ್ರ ಮುಂದಿನ ಭವಿಷ್ಯಕ್ಕೆ ಪರಿಸರವನ್ನು ಉಳಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ದಯಾನಂದ ಮಾತನಾಡಿ, ಪರಿಸರ ಮಾಲಿನ್ಯದಿಂದ ಜಾಗತಿಕ ತಾಪಮಾನ ಹೆಚ್ಚಳವಾಗಿದೆ.
ಅಲ್ಲದೇ ವಾತಾವರಣ ವೈಪರೀತ್ಯದಿಂದ ಮಳೆ ಸರಿಯಾದ ಸಮಯಕ್ಕೆ ಬಾರದೇ ಕೃಷಿ ಚಟುವಟಿಕೆ ಮಾಡಲು ತೊಂದರೆಯಾಗುತ್ತಿದೆ. ಪರಿಸರ ಮಾಲಿನ್ಯದಿಂದ ವಾತಾವರಣ ಬದಲಾವಣೆ ಅನೇಕ ಸಮಸ್ಯೆಗಳಿಗೆ ಕಾರಣವಾಗಿವೆ ಎಂದರು.
ವೀರಾಜಪೇಟೆ ಅರಣ್ಯ ಇಲಾಖೆ ಆರ್.ಎಫ್.ಓ. ದೇವಯ್ಯ ಮಾತನಾಡಿ, ಅರಣ್ಯದಲ್ಲಿ ಜೀವಿಗಳಿಗೆ ಆಹಾರದ ಕೊರತೆ ಇದೆ. ಇದಕ್ಕೆ ಹಣ್ಣಿನ ಬೀಜದ ಬಿತ್ತನೆ ಅವಶ್ಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಉಪಾಧ್ಯಕ್ಷ ರಾಣಿ ಮಾಚಯ್ಯ, ಜಿಲ್ಲಾ ಸಂಘಟಕರು ದಮಯಂತಿ.ಯು.ಸಿ, ಜಿಲ್ಲಾ ಸಹ ಕಾರ್ಯದರ್ಶಿ ಸರೋಜ, ಜಿಲ್ಲಾ ಖಜಾಂಚಿ ಪುಷ್ಪವೇಣಿ, ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಸಚಿನ್ ಕುಟ್ಟಯ್ಯ, ಉಪಾಧ್ಯಕ್ಷ ತಸ್ಲಿಮ್ ಅಖ್ತರ್, ಕಾರ್ಯದರ್ಶಿ ಎಂ.ಕೆ. ನಳಿನಾಕ್ಷಿ, ಸಹಕಾರ್ಯದರ್ಶಿ ಬಿ.ಬಿ ಜಾಜಿ, ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ ಲೀಡರ್ ವನಿತ್ ಕುಮಾರ್, ಎಂ.ಎನ್ ರೇಂಜರ್ ಲೀಡರ್ ರಾಖಿ ಪೂವಣ್ಣ, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ವೀರಾಜಪೇಟೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ಗಳು ಹಾಜರಿದ್ದರು.