ಮಡಿಕೇರಿ, ಜೂ. ೧೭: ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಪುಸ್ತಕಗಳನ್ನು ಸರಕಾರ ಹಿಂಪಡೆಯುವAತೆ ಒತ್ತಾಯಿಸಿ ಕೊಡಗು ಜಿಲ್ಲಾ ಸಹಮತ ವೇದಿಕೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಈ ಆಗ್ರಹದೊಂದಿಗೆ ಹಿಂದಿನ ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯಪುಸ್ತಕಗಳ ಪರಿಷ್ಕೃತ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವಂತೆಯೂ ಆಗ್ರಹಿಸಿ ವೇದಿಕೆ ಪ್ರಮುಖರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಭಾರತ ಜಾತ್ಯಾತೀತ ರಾಷ್ಟçವೆಂದು ನಮ್ಮ ಸಂವಿಧಾನವೇ ಹೇಳಿದೆ. ನ್ಯಾಯ ಸಮ್ಮತ ವಿಚಾರಗಳಿಗಾಗಿ ಹೋರಾಡಲು ಮತ್ತು ಮೂಲಭೂತ ಅವಶ್ಯಕತೆಗಳನ್ನು ಪಡೆದುಕೊಳ್ಳಲು ಸಮಾನತೆಯ ಸಮಾಜದಲ್ಲಿ ಸಹಮತ ವೇದಿಕೆಯ ಮೂಲಕ ನಾವು ಮುಂದಾಗಿದ್ದೇವೆ.

ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ಆಗಿರುವಂತಹ ಅದ್ವಾನಗಳನ್ನು ಸರಿಪಡಿಸದೆ ವಿದ್ಯಾರ್ಥಿಗಳಿಗೆ ಆ ಪಠ್ಯ ಪುಸ್ತಕಗಳನ್ನು ವಿತರಿಸಬಾರದೆಂಬುದು ನಮ್ಮ ಒತ್ತಾಯವಾಗಿದೆ. ನಾಡಗೀತೆಗೆ ಅವಮಾನ ಆಗಿರುವುದನ್ನು ಖಂಡಿಸುತ್ತೇವೆ ಎಂದು ವೇದಿಕೆ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.

ತರಾತುರಿಯ ಚಕ್ರತೀರ್ಥ ಸಮಿತಿಯ ಪಠ್ಯ ಪುಸ್ತಕಗಳು ಮಕ್ಕಳನ್ನು ಗೊಂದಲಕ್ಕೆ ಇಳಿಸಿದೆ. ಇಲ್ಲಿ ಸರಕಾರ, ರಾಜಕೀಯ ಮುಖ್ಯವಲ್ಲ. ವಿದ್ಯಾರ್ಥಿಗಳ ಭವಿಷ್ಯ ಮುಖ್ಯ. ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರಿ ಹೋಗಿರುವ ಆ ಮಹಾನ್ ಮಾನವತಾವಾದಿಗಳ ಸಂದೇಶ ಮುಖ್ಯ. ಅದನ್ನು ಬೋಧಿಸಲು ಸರಕಾರ ಮುಂದಾಗಬೇಕು. ರಾಜಕೀಯ ಸಂಬAಧಗಳನ್ನು ಪರೋಕ್ಷವಾಗಿ ಪಠ್ಯದಲ್ಲಿ ತುರುಕಿ ಓದುವ ಮನಸ್ಸುಗಳ ಹಾದಿ ತಪ್ಪಿಸಬಾರದೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಪ್ರತಿಭಟನೆ ಸಂದರ್ಭ ವೇದಿಕೆ ಪ್ರಮುಖರುಗಳಾದ ಟಿ.ಎಂ. ಮುದ್ದಯ್ಯ, ವಿ.ಪಿ. ಶಶಿಧರ್, ಎಂ.ಪಿ. ಕೇಶವಕಾಮತ್, ಈರಮಂಡ ಸೋಮಣ್ಣ, ಅಂಬೆಕಲ್ ನವೀನ್ ಕುಶಾಲಪ್ಪ, ಹೆಚ್.ಎಲ್. ದಿವಾಕರ್, ಗೌತಮ್ ಶಿವಪ್ಪ, ಕೆ.ಎ. ಯಾಕೂಬ್, ಅಬ್ದುಲ್ ರೆಹಮಾನ್, ಇಸ್ಮಾಯಿಲ್, ಸಬಾಸ್ಟಿನ್, ಪಿಯೂಸ್, ನೆರವಂಡ ಉಮೇಶ್, ಕೆ.ಜಿ. ಪೀಟರ್, ಹ್ಯಾರೀಸ್, ಬೇಕಲ್ ರಮಾನಾಥ್, ಹೆಚ್.ಎಸ್. ಪ್ರೇಂಕುಮಾರ್, ಉಸ್ಮಾನ್, ಟಿ.ಹೆಚ್. ಉದಯ, ಎಂ.ಎA. ಲಿಯಾಕತ್ ಆಲಿ, ಮೊಯ್ದು ಕುಂಞ್ಞ, ಸಾಜಿ, ಹನೀಫ್ ಸಂಪಾಜೆ, ಪಿ.ಎಲ್. ಸುರೇಶ್, ಎಂ.ಹೆಚ್. ಮೂಸಾ, ಟಿ.ಹೆಚ್. ಮಂಜುನಾಥ್, ಸದಾನಂದ ಬಂಗೇರ, ಸುನಿಲ್ ಪತ್ರಾವೋ, ಹೆಚ್.ಕೆ. ಪ್ರೇಮಾ, ದೀಪಕ್ ಪೊನ್ನಪ್ಪ ಸೇರಿದಂತೆ ಇನ್ನಿತರರು ಇದ್ದರು.