ಮಡಿಕೇರಿ, ಜೂ. ೧೬: ಜಿಲ್ಲೆಯ ಅತ್ಯಂತ ಗ್ರಾಮೀಣ ಭಾಗದಲ್ಲಿರುವ, ಗಾಳಿಬೀಡು ಗ್ರಾಮದ ವಣಚಲಿನ ಅಂಗನವಾಡಿ ಕೇಂದ್ರದಲ್ಲಿ ಇರುವುದೊಂದೇ ವಿದ್ಯಾರ್ಥಿನಿ, ಈ ೪ ವರ್ಷದ ಬಾಲೆಯು ಪ್ರತಿನಿತ್ಯ ಅಂಗನವಾಡಿ ಕೇಂದ್ರಕ್ಕೆ ತೆರಳಿ ಅಚ್ಚುಕಟ್ಟಾಗಿ ವಿದ್ಯಾಭ್ಯಾಸ ಮಾಡುತ್ತಿರುವುದು ಹಾಗೂ ಉತ್ಸಾಹದಲ್ಲಿ ಒಂದೇ ವಿದ್ಯಾರ್ಥಿನಿಗೆ ಪಾಠ ಪ್ರವಚನ
ಮಾಡುತ್ತಿರುವ ಶಿಕ್ಷಕಿಯ ಸೇವೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರ ಗಮನವನ್ನೂ ಸೆಳೆದಿದೆ.
ಕಡಿಮೆ ಜನಸಂಖ್ಯೆ (೧೧೫) ಹೊಂದಿರುವ ಈ ಗ್ರಾಮದಲ್ಲಿನ ಕಾಡಂಚಿನ ಗ್ರಾಮವಾದ ವಣಚಲಿನ ಅಂಗನವಾಡಿ ಕೇಂದ್ರದಲ್ಲಿ ಕೇವಲ ಒಂದೇ ವಿದ್ಯಾರ್ಥಿನಿ ದಾಖಲಾಗಿದ್ದಾಳೆ. ಆದರೂ ಕರ್ತವ್ಯ ನಿಷ್ಠೆ ತೋರುತ್ತಿರುವ ಕೇಂದ್ರದ ಶಿಕ್ಷಕಿ ಧರಣಿ ಅವರು ಈ ಪುಟ್ಟ ಬಾಲೆಗೆ ಪ್ರತಿನಿತ್ಯ ವಿದ್ಯೆ ಕಲಿಸುತ್ತಿರುವುದು ಸರ್ವರ ಗಮನ ಸೆಳೆಯುವಂತಿದೆ. ವಿದ್ಯಾರ್ಥಿನಿಯೂ ಇದೇ ಹುಮ್ಮಸ್ಸಿನಲ್ಲಿ ವಿದ್ಯೆ ಕಲಿತಿರುವುದು ವಿಶೇಷ.
ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಶಿಕ್ಷಕಿಯ ಕಾರ್ಯವನ್ನು ಶ್ಲಾಘಿಸಿದರು. ಅದಲ್ಲದೇ ವಿದ್ಯಾರ್ಥಿನಿಯೊಂದಿಗೂ ಸ್ವಲ್ಪ ಸಮಯ ಕಳೆದು ಆಕೆ ಕಲಿತ ಇಂಗ್ಲಿಷ್ ಹಾಗೂ ಕನ್ನಡ ವರ್ಣಮಾಲೆಯನ್ನು ಆಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾಪೂರ್ವ ಶಿಕ್ಷಣ ನೀಡುವಲ್ಲಿ ಜಿಲ್ಲೆಯ ಅಂಗನವಾಡಿಗಳು ಉತ್ತಮ ಕಾರ್ಯನಿರ್ವಹಿಸುತ್ತಿವೆ. ಯಾವೊಬ್ಬ ಮಗುವೂ ಶಾಲಾಪೂರ್ವ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸರ್ಕಾರದ ಉದ್ದೇಶವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವಣಚಲು ಅಂಗನವಾಡಿ ಕೇಂದ್ರ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಅಂಗನವಾಡಿ ಕೇಂದ್ರದಲ್ಲಿ ಕೇವಲ ಒಂದು ವಿದ್ಯಾರ್ಥಿ ದಾಖಲಾಗಿದ್ದರೂ ಸಹ ಶಾಲಾಪೂರ್ವ ಶಿಕ್ಷಣ ನೀಡುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರವನ್ನು ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸರ್ಕಾರದಿಂದ ನೀಡಲಾಗುವ ಸವಲತ್ತುಗಳನ್ನು ಸೂಕ್ತ ರೀತಿಯಲ್ಲಿ ಮಕ್ಕಳಿಗೆ ತಲುಪಿಸುವಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಮಹತ್ವದ್ದು ಎಂದು ಭಂವರ್ ಸಿಂಗ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಂಗನವಾಡಿ ಭೇಟಿ ಸಂದರ್ಭ ಮಡಿಕೇರಿ ತಾ.ಪಂ. ಇಓ ಶೇಖರ್, ಗಾಳಿಬೀಡು ಗ್ರಾ.ಪಂ. ಉಪಾಧ್ಯಕ್ಷ ಉಡುದೋಳಿ ಗಿರೀಶ್, ಗ್ರಾ.ಪಂ. ಪಿಡಿಓ ಶಶಿಕಿರಣ್ ಇತರರು ಇದ್ದರು.