ಮಡಿಕೇರಿ, ಜೂ. ೧೭: ರೋಟರಿ ಸಂಸ್ಥೆಗಳ ಸಂಖ್ಯೆ ಹೆಚ್ಚಳದ ಮೂಲಕ ನವ ಸದಸ್ಯರೊಂದಿಗೆ ಜನಸೇವೆ ವಿಸ್ತಾರಗೊಳ್ಳುವಂತಾಗುತ್ತದೆ. ಜಾಸ್ತಿ ಜನ ಹೆಚ್ಚು ಸೇವೆ ಎಂಬ ಮಾತಿಗೆ ಆದ್ಯತೆ ದೊರಕುತ್ತದೆ. ರೋಟರಿ ಸಂಸ್ಥೆ ಹೊಸ ಸದಸ್ಯರ ನಿರೀಕ್ಷೆಯಲ್ಲಿದೆ ಎಂದು ರೋಟರಿ ಜಿಲ್ಲೆ ೩೧೮೧ ನ ಗವರ್ನರ್ ಎ.ಆರ್. ರವೀಂದ್ರ ಭಟ್ ಅಭಿಪ್ರಾಯಪಟ್ಟರು.

ಮಡಿಕೇರಿ ಗೌಡ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ವುಡ್ಸ್ ಎಂಬ ಹೊಸ ರೋಟರಿ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ರವೀಂದ್ರ ಭಟ್, ಯಾರು ಇತರರಿಗೆ ನೆರವು ನೀಡಲು ಮನಸ್ಸು ಹೊಂದಿರುತ್ತಾರೆಯೋ, ಯಾರು ಬೇರೆಯವರನ್ನು ಬೆಳೆಸುವ ಗುಣ ಹೊಂದಿರುತ್ತಾರೆಯೋ ಅಂಥವರು ನಿಜವಾದ ನಾಯಕರು ಎನಿಸಿಕೊಳ್ಳುತ್ತಾರೆ. ನಾಯಕನಾದವನು ಎಲ್ಲರಿಗೂ ಹೊಣೆಗಾರಿಕೆ ಹಂಚಿ, ಎಲ್ಲರನ್ನೂ ಸಮಾನ ಭಾವನೆಯಿಂದ ಜನಸೇವೆಯ ಗುರಿಯತ್ತ ಕರೆದೊಯ್ಯುವ ಗುಣ ಮುಖ್ಯವಾಗಿರಬೇಕು. ಇಂತಹ ನಾಯಕರ ಅಗತ್ಯ ಸಾಮಾಜಿಕ ಸೇವಾ ಸಂಸ್ಥೆಯಾದ ರೋಟರಿಗೆ ಇದೆ ಎಂದು ಹೇಳಿದರು.

ರೋಟರಿ ಸಂಸ್ಥೆಯಲ್ಲಿ ಸದಸ್ಯತ್ವ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತೀ ಸದಸ್ಯ ಮತ್ತೋರ್ವ ಸದಸ್ಯನನ್ನು ರೋಟರಿಗೆ ಪರಿಚಯಿಸಿ ಎಂಬ ಅಭಿಯಾನ ನಡೆಯುತ್ತಿದ್ದು ವಿಶ್ವದಾದ್ಯಂತ ಈ ಅಭಿಯಾನದಿಂದಾಗಿ ೨೦ ಸಾವಿರ ಸದಸ್ಯರ ನೋಂದಣಿಯಾಗಿದೆ ಎಂದು ರವೀಂದ್ರ ಭಟ್ ಮಾಹಿತಿ ನೀಡಿದರು.

ಗೆಳೆತನ ಹಾಗೂ ಸೇವೆಗೆ ವಿಶ್ವದಲ್ಲಿಯೇ ಮತ್ತೊಂದು ಹೆಸರಿನಂತಿರುವ ರೋಟರಿ ಶಾಂತಿ, ಸೌಹಾರ್ದತೆ, ಶಿಕ್ಷಣ, ಆರೋಗ್ಯ, ಪರಿಸರ ರಕ್ಷಣೆಯಂಥ ಧ್ಯೇಯಗಳನ್ನು ಹೊಂದಿರುವ ಸಂಸ್ಥೆಯಾಗಿದೆ. ಜಗತ್ತಿನಾದ್ಯಂತ ೩೫ ಸಾವಿರದಷ್ಟು ರೋಟರಿ ಸಂಸ್ಥೆಗಳು ಅಗತ್ಯವುಳ್ಳವರಿಗೆ ಸೂಕ್ತ ನೆರವು ನೀಡುತ್ತಾ ಬಂದಿವೆ. ರೋಟರಿಗೆ ನೀಡುವ ಆರ್ಥಿಕ ನೆರವು ಖಂಡಿತಾ ವ್ಯರ್ಥವಾಗಲಾರದು. ಈ ನೆರವು ಜಾಗತ್ತಿನಾದ್ಯಂತ ಲಕ್ಷಾಂತರ ಮಂದಿಗೆ ಸೂಕ್ತ ಸಹಾಯಕ್ಕೆ ಕಾರಣವಾಗಿ ಕೊಡುಗೆ ನೀಡಿದವರ ಮನಸ್ಸಿಗೆ ಸಾರ್ಥಕತೆ ಉಂಟು ಮಾಡುತ್ತದೆ ಎಂದು ರವೀಂದ್ರ ಭಟ್ ಹೇಳಿದರು. ಮಡಿಕೇರಿಯಲ್ಲಿ ರೋಟರಿ ವುಡ್ಸ್ ಮೂಲಕ ಮತ್ತೊಂದು ರೋಟರಿ ಸೇವಾ ಸಂಸ್ಥೆ ಉದಯವಾಗಿರುವುದು ಮತ್ತಷ್ಟು ಜನತೆಗೆ ನೆರವಿನ ಕೊಡುಗೆ ತಲುಪಲು ಸಹಕಾರಿಯಾಗಿದೆ ಎಂದರು.

ರೋಟರಿ ಸದಸ್ಯತ್ವ ವಿಸ್ತರಣೆಯ ರಾಷ್ಟಿçÃಯ ಸಮಿತಿ ನಿರ್ದೇಶಕ ಮಾತಂಡ ಸುರೇಶ್ ಚಂಗಪ್ಪ ಮಾತನಾಡಿ, ನೆರವು ನೀಡುವ ಮನಸ್ಸುಳ್ಳವರಿಗೆ ರೋಟರಿ ಸಂಸ್ಥೆ ಅತ್ಯುತ್ತಮ ವೇದಿಕೆಯಾಗಿದ್ದು, ಜಾತಿಮತ ಬೇಧವಿಲ್ಲದೆ ರೋಟರಿ ಸಂಸ್ಥೆಯು ಜನಮಾನಸಕ್ಕೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ ಎಂದು ಹೇಳಿದರು.

ರೋಟರಿ ಜಿಲ್ಲೆಯ ಕ್ಲಬ್ ವಿಸ್ತರಣಾ ಸಮಿತಿ ಅಧ್ಯಕ್ಷ ಡಾ. ಪಿ.ಕೆ. ಕೇಶವ್ ಮಾತನಾಡಿ, ಅಂತರ್ಮುಖಿ ಯಾಗಿದ್ದವರನ್ನು ಸಮಾಜಮುಖಿ ಯಾಗಿಸಿ ಜನಸೇವೆಗೆ ಸ್ಫೂರ್ತಿ ತುಂಬುವಲ್ಲಿ ರೋಟರಿ ಸಂಸ್ಥೆಗಳ ಪಾತ್ರ ಮುಖ್ಯವಾದದ್ದು ಎಂದು ಹೇಳಿದರಲ್ಲದೇ, ರೋಟರಿ ಅವಕಾಶಗಳ ಆಗರವಾಗಿದ್ದು ಸಮರ್ಥವಾಗಿ ಇಂತಹ ಅವಕಾಶಗಳನ್ನು ಬಳಸಿಕೊಳ್ಳಿ ಎಂದು ಕರೆ ನೀಡಿದರು.

ರೋಟರಿ ವಲಯ ಉಪರಾಜ್ಯಪಾಲ ಅನಿಲ್ ಹೆಚ್.ಟಿ. ಮಾಹಿತಿ ನೀಡಿ ರೋಟರಿ ವುಡ್ಸ್ ಪ್ರಾರಂಭದೊAದಿಗೆ ಕೊಡಗಿನಲ್ಲಿ ೧೦ನೇ ರೋಟರಿ ಸಂಸ್ಥೆ ಪ್ರಾರಂಭಿಸಲ್ಪಟ್ಟಿದೆ. ಜಿಲ್ಲೆಯಲ್ಲಿ ೩೬೦ ರಷ್ಟು ರೋಟರಿ ಸದಸ್ಯರಿದ್ದು ೧೭ ವರ್ಷಗಳ ಹಿಂದೆ ಪ್ರಾರಂಭವಾದ ರೋಟರಿ ಮಿಸ್ಟಿ ಹಿಲ್ಸ್ ತನ್ನ ಮೊದಲ ಮಹಿಳಾ ಅಧ್ಯಕ್ಷಾವಧಿಯಲ್ಲಿ ಹೊಸದಾಗಿ ರೋಟರಿ ವುಡ್ಸ್ ಪ್ರಾರಂಭಿಸುತ್ತಿರುವುದು ಶ್ಲಾಘನೀಯ ಎಂದರು.

ರೋಟರಿ ವುಡ್ಸ್ನ ಮಾರ್ಗದರ್ಶಿ ಬಿ.ಜಿ. ಅನಂತಶಯನ ಮಾತನಾಡಿ, ಮಡಿಕೇರಿಯಲ್ಲಿ ಹೊಸದಾಗಿ ರೋಟರಿ ಸಂಸ್ಥೆಯ ಆರಂಭಕ್ಕೆ ಉತ್ತಮ ಸ್ಪಂದನೆ ದೊರಕಿದೆ. ೨೮ ಸದಸ್ಯರು ಹೊಸ ಸಂಸ್ಥೆಯಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ರೋಟರಿ ವುಡ್ಸ್ನ ಅಧ್ಯಕ್ಷರಾಗಿ ಎಸ್.ಎಸ್. ಸಂಪತ್ ಕುಮಾರ್, ಕಾರ್ಯದರ್ಶಿಯಾಗಿ ಕೆ. ವಸಂತ ಕುಮಾರ್ ಮತ್ತು ನೂತನ ಆಡಳಿತ ಮಂಡಳಿಗೆ ಪದಗ್ರಹಣ ಮಾಡಲಾಯಿತು. ಪ್ರಜ್ಞಾ ರಾಜೇಂದ್ರ ಹಾಗೂ ಜಿ.ಆರ್. ಪ್ರಜ್ವಲ್ ಸಂಪಾದಕತ್ವದಲ್ಲಿ ಪ್ರಕಟಿತ ರೋಟರಿ ವುಡ್ಸ್ ವಾರ್ತಾ ಸಂಚಿಕೆಯನ್ನೂ ಬಿಡುಗಡೆಗೊಳಿಸಲಾಯಿತು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ರೋಟರಿ ವಲಯ ಕಾರ್ಯದರ್ಶಿ ಹೆಚ್.ಎಸ್. ವಸಂತ ಕುಮಾರ್, ವಲಯ ಸೇನಾನಿ ಜಗದೀಶ್ ಪ್ರಶಾಂತ್, ಮುಂದಿನ ಸಾಲಿನ ಉಪರಾಜ್ಯಪಾಲ ರತನ್ ತಮ್ಮಯ್ಯ, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಆರ್. ರಾಜೇಶ್, ರೋಟರಿ ಮಾಜಿ ಗವರ್ನರ್ ಡಾ. ರವಿ ಅಪ್ಪಾಜಿ, ರೋಟರಿ ಜಿಲ್ಲಾ ಕಾರ್ಯದರ್ಶಿ ವಿವೇಕ್ ಅತ್ತಾವರ್, ಜಂಟಿ ಕಾರ್ಯದರ್ಶಿ ವಿಜಯೇಂದ್ರ ಸೇರಿದಂತೆ ರೋಟರಿಯ ಪ್ರಮುಖರು, ವಿವಿಧ ಸಂಘ- ಸಂಸ್ಥೆಗಳ ಪ್ರಮುಖರು ಹಾಜರಿದ್ದರು.

ರೋಟರಿ ವುಡ್ಸ್ ಸದಸ್ಯರಾದ ಕಿಗ್ಗಾಲು ಹರೀಶ್, ಪ್ರಶಾಂತ್, ಪ್ರಕೃತಿ ಸುರೇಶ್, ಕವಿತಾ ಹಾಗೂ ಪದ್ಮಗಿರಿ ಅವರುಗಳು ಅತಿಥಿ ಗಣ್ಯರ ಪರಿಚಯ ಮಾಡಿದರು.