(ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಜೂ. ೧೬: ರೈತರು, ಕಾಫಿ ಬೆಳೆಗಾರರು ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದು ಇದೀಗ ಇದರ ಸಾಲಿಗೆ ಕೊಡಗಿನ ತೋಟಗಾರಿಕೆ ಬೆಳೆಗಳಲ್ಲಿ ಪ್ರಮುಖವಾದ ಅಡಿಕೆ ಬೆಳೆಗೆ ರೈತರು ಸಿಂಪಡಿಸಿದ ಬೋರ್ಡೊ ಮಿಶ್ರಣ ದ್ರಾವಣದಲ್ಲಿ ವ್ಯತ್ಯಾಸ ಕಂಡ ಹಿನ್ನೆಲೆಯಲ್ಲಿ ನೂರಾರು ಎಕರೆ ಭೂಮಿಯಲ್ಲಿ ಅಡಿಕೆ ಬೆಳೆಗೆ ಬಳಸಿದ್ದ ಈ ದ್ರಾವಣದಿಂದಾಗಿ ರೈತರ ಅಡಿಕೆ ಗಿಡ ಹಾಗೂ ತೋಟದಲ್ಲಿದ್ದ ಕಾಫಿ ಹಾಗೂ ಇನ್ನಿತರ ಗಿಡಗಳಿಗೆ ಹಾನಿ ಸಂಭವಿಸಿದೆ.

ಅಡಿಕೆ ಬೆಳೆಗೆ ಸಿಂಪಡಿಸಿದ ಬೋರ್ಡೊ ಪ್ರಮಾಣದಲ್ಲಿ ರಸ ಸಾರದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ದ.ಕೊಡಗಿನ ಬಹುತೇಕ ರೈತರ ಅಡಿಕೆ ಬೆಳೆಗಳು ಉದುರಲಾರಂಭಿಸಿವೆ. ಇದರಿಂದ ಕಂಗಾಲಾದ ರೈತರಿಗೆ ದಿಕ್ಕೇ ತೋಚದಂತಾಗಿದೆ. ಮಾಹಿತಿ ತಿಳಿದ ಟಿ.ಶೆಟ್ಟಿಗೇರಿಯ ರೈತರಾದ ಕಟ್ಟೇರ ಈಶ್ವರ ಅವರಿಗೆ ಈ ಭಾಗದ ರೈತರು ಮಾಹಿತಿ ಒದಗಿಸಿದ್ದರು.

ರೈತರ ಸಮಸ್ಯೆಗಳನ್ನು ಆಲಿಸುವಂತೆ ಕೃಷಿ ವಿಜ್ಞಾನ ಕೇಂದ್ರಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ರೈತರ ಬೆಳೆಯ ಪರಿಸ್ಥಿತಿಯನ್ನು ಅವಲೋಕಿಸುವಂತೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರ ಕೃಷಿ ವಿಜ್ಞಾನಿ ಡಾ. ವೀರೇಂದ್ರ ಕುಮಾರ್, ತೋಟಗಾರಿಕಾ ವಿಜ್ಞಾನಿ ಡಾ. ಕೆ.ಎ. ದೇವಯ್ಯ ಟಿ.ಶೆಟ್ಟಿಗೇರಿಯ ರೈತರ

(ಮೊದಲ ಪುಟದಿಂದ) ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಡಿಕೆ ಬೆಳೆಯುವ ತೋಟದಲ್ಲಿ ಇರುವ ಕಾಫಿ ಗಿಡದ ಎಲೆಗಳು ಕೂಡ ಅರಿಶಿಣ ಬಣ್ಣಕ್ಕೆ ತಿರುಗಿದ್ದು ದ್ರಾವಣ ಸಿಂಪಡನೆಯಲ್ಲಿ ವ್ಯತ್ಯಾಸವಾಗಿರುವುದೇ ಇದಕ್ಕೆ ಕಾರಣವೆಂದು ರೈತರಿಗೆ ಮಾಹಿತಿ ಒದಗಿಸಿದ್ದಾರೆ.

ಟಿ.ಶೆಟ್ಟಿಗೇರಿ ಗ್ರಾಮದ ಉಳ್ಳಂಗಡ ಜೀವನ್ ಅವರು ಅನೇಕ ವರ್ಷಗಳಿಂದ ತೋಟಗಾರಿಕಾ ಬೆಳೆಗಳಲ್ಲಿ ಪ್ರಮುಖವಾದ ಅಡಿಕೆ ಬೆಳೆಯನ್ನು ತಮ್ಮ ತೋಟದಲ್ಲಿ ೫ ಎಕರೆಗೂ ಅಧಿಕ ಭೂಮಿಯಲ್ಲಿ ಬೆಳೆಯುತ್ತಿದ್ದರು. ನಿಗದಿತ ಸಮಯದಲ್ಲಿ ರಸಗೊಬ್ಬರ ಹಾಗೂ ಕ್ರಿಮಿನಾಶಕ ಸಿಂಪಡಿಸುತ್ತಿದ್ದರು. ಕಳೆದ ಬಾರಿ ೧೬೦ಕ್ಕೂ ಅಧಿಕ ಕ್ವಿಂಟಾಲ್ ಅಡಿಕೆಯನ್ನು ಬೆಳೆದಿದ್ದರು. ಈ ಬಾರಿಯು ಅಡಿಕೆ ಬೆಳೆಗೆ ದ್ರಾವಣ ಸಿಂಪಡನೆ ಮಾಡುವ ಸಂದರ್ಭ ಮಾರುಕಟ್ಟೆಯಿಂದ ತಂದ ಕಲಬೆರಕೆಯ ಬೋರ್ಡೊ ಮಿಶ್ರಣದಲ್ಲಿ ವ್ಯತ್ಯಾಸಗೊಂಡು ಸಮಸ್ಯೆ ಎದುರಾಗಿವೆ. ಇದರಿಂದ ಅಡಿಕೆ ಬೆಳೆಗಳು ಸಂಪೂರ್ಣವಾಗಿ ಉದುರಲಾರಂಭಿಸಿವೆ.

ರೈತರು ಮೊದಲೇ ಸಂಕಷ್ಟ ಎದುರಿಸುತ್ತಿರುವ ವೇಳೆ ಇದೀಗ ಮತ್ತೆ ಸಮಸ್ಯೆ ಎದುರಾಗಿದೆ. ನಷ್ಟದಲ್ಲಿರುವ ರೈತನಿಗೆ ಕೂಡಲೇ ಪರಿಹಾರ ನೀಡಲು ಇಲಾಖೆ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಗೆ ಕಳಪೆ ಮಟ್ಟದ ಸುಣ್ಣವನ್ನು ಬಿಡುವ ಏಜೆನ್ಸಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ರೈತ ಮೋರ್ಚಾದ ತಾಲೂಕು ಅಧ್ಯಕ್ಷ ಕಟ್ಟೇರ ಈಶ್ವರ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.