ಸುಂಟಿಕೊಪ್ಪ, ಜೂ. ೧೬: ಸುಂಟಿಕೊಪ್ಪ ಹರದೂರು ಗ್ರಾಮ ಪಂಚಾಯಿತಿಯ ಗರಗಂದೂರು ಗ್ರಾಮದಿಂದ ಕಾಣೆಯಾಗಿದ್ದ ಮಹಿಳೆ ಹಾಗೂ ಆಕೆಯ ಪುತ್ರಿ ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದು, ಇಬ್ಬರನ್ನೂ ಸುರಕ್ಷಿತವಾಗಿ ಮನೆಗೆ ಕರೆತರಲಾಗಿದೆ. ತಾ. ೧೪ ರಂದು ಬೆಳಿಗ್ಗೆ ಮಹಿಳೆ ತನ್ನ ಹೆಣ್ಣು ಮಗುವಿನೊಂದಿಗೆ ಸುಂಟಿಕೊಪ್ಪ ಆಸ್ಪತ್ರೆಗೆಂದು ಬಂದವರು ಮಂಗಳೂರು ಬಸ್ಸಿನಲ್ಲಿ ಪ್ರಯಾಣಿಸಿದ್ದು, ಹಿಂತಿರುಗಿ ಬಾರದ ಕಾರಣ ಸುಂಟಿಕೊಪ್ಪ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಾ. ೧೪ ರಂದು ಮಹಿಳೆ ಮಂಗಳೂರು ಕಡೆಗೆ ಪ್ರಯಾಣಿಸಿ ಮಂಗಳೂರಿನಲ್ಲಿ ಉಳಿದು ನಂತರ ತಾ. ೧೫ ರಂದು ಧರ್ಮಸ್ಥಳಕ್ಕೆ ಪ್ರಯಾಣಿಸುವ ಸಂದರ್ಭ ಪತಿಗೆ ಕರೆ ಮಾಡಿದ್ದಾರೆ. ಆದರೆ ಸ್ಥಳದ ವಿವರ ತಿಳಿಸಿರಲಿಲ್ಲ. ಪೊಲೀಸರು ಮೊಬೈಲ್ ನಂಬರನ್ನು ಟ್ರೇಸ್ ಮಾಡಿದಾಗ ಮಹಿಳೆ ಧರ್ಮಸ್ಥಳದಲ್ಲಿರುವ ಮಾಹಿತಿ ಲಭ್ಯವಾಗಿದೆ. ನಂತರ ಪೊಲೀಸರು ತಾಯಿ ಹಾಗೂ ಮಗುವನ್ನು ವಶಕ್ಕೆ ಪಡೆದು ಪತಿಯ ಮನೆಯವರಿಗೆ ತಿಳಿಸಿದ್ದಾರೆ.