ಸಿದ್ದಾಪುರ, ಜೂ ೧೬: ನೆಲ್ಯಹುದಿಕೇರಿ ಗ್ರಾಮದ ಶಾಲೆ ರಸ್ತೆಯಲ್ಲಿ ಒಂಟಿ ಸಲಗವೊಂದು ಕಾಫಿ ತೋಟದೊಳಗೆ ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸಿದೆ. ನೆಲ್ಯಹುದಿಕೇರಿ ಗ್ರಾಮದ ಶಾಲೆ ರಸ್ತೆಯ ನಿವಾಸಿಗಳಾದ ವಿಠಲ ಹಾಗೂ ತೀರ್ಥಕುಮಾರ್ ಎಂಬವರ ಕಾಫಿ ತೋಟಕ್ಕೆ ರಾತ್ರಿ ಸಮಯದಲ್ಲಿ ಒಂಟಿ ಸಲಗವೊಂದು ನುಗ್ಗಿ ಕಾಫಿ ಗಿಡಗಳನ್ನು ಹಾಗೂ ಅಡಿಕೆ ತೆಂಗಿನ ಮರಗಳನ್ನು ಎಳೆದು ಹಾಕಿ ದಾಂಧಲೆ ನಡೆಸಿ ಧ್ವಂಸಗೊಳಿಸಿದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ. ಬೃಹತ್ ಗಾತ್ರದ ಒಂಟಿ ಸಲಗವು ಕಳೆದ ಕೆಲವು ದಿನಗಳಿಂದ ನೆಲ್ಯಹುದಿಕೇರಿ ಭಾಗದ ಶಾಲೆಯ ರಸ್ತೆ ಸುತ್ತಮುತ್ತ ಪ್ರದೇಶಗಳಲ್ಲಿ ಸುತ್ತಾಡುತ್ತಿದೆ. ಒಂಟಿ ಸಲಗವು ಕಾಫಿ ತೋಟದಲ್ಲಿ ಬೀಡುಬಿಟ್ಟಿರುವುದನ್ನು ಕಂಡ ಸ್ಥಳೀಯ ಯುವಕರು ಬೊಬ್ಬೆ ಹಾಕಿದಾಗ ಸಲಗವು ಯುವಕರ ಮೇಲೆ ಧಾಳಿ ನಡೆಸಲು ಮುಂದಾಗಿದೆ. ಅದೃಷ್ಟವಶಾತ್ ಕೂದಲೆಳೆಯ ಅಂತರದಿAದ ಯುವಕರು ಪಾರಾಗಿದ್ದಾರೆ. ಒಂಟಿ ಸಲಗದ ಉಪಟಳದಿಂದಾಗಿ ಕಾರ್ಮಿಕರಿಗೆ ಕೆಲಸಕ್ಕೆ ತೆರಳಲು ಹಾಗೂ ಶಾಲಾ ಮಕ್ಕಳಿಗೆ ಶಾಲೆಗೆ ತೆರಳಲು ಭಯದ ವಾತಾವರಣ ಮೂಡಿದೆ. ನೆಲ್ಯಹುದಿಕೇರಿಯ ಅತ್ತಿಮಂಗಲ ಮೇರಿಲ್ಯಾಂಡ್ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ. ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
- ವಾಸು.