ಮುಳ್ಳೂರು, ಜೂ. ೧೬: ‘ವಿದ್ಯಾರ್ಥಿಗಳಲ್ಲಿ ಛಲಗಾರಿಕೆ, ಏಕಾಗ್ರತೆ ಮತ್ತು ಕಠಿಣ ಪರಿಶ್ರಮ ಇದ್ದಲ್ಲಿ ಸಾಧನೆಯ ಗುರಿಮುಟ್ಟಲು ಸಾಧ್ಯವಾಗುತ್ತದೆ’ ಎಂದು ಶನಿವಾರಸಂತೆ ಪೊಲೀಸ್ ವೃತ್ತ ನಿರೀಕ್ಷಕ ಎಸ್. ಪರಶಿವಮೂರ್ತಿ ಅಭಿಪ್ರಾಯಪಟ್ಟರು.

ಶನಿವಾರಸಂತೆ ಗ್ರಾ.ಪಂ. ವತಿಯಿಂದ ಗ್ರಾ.ಪಂ. ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕಗಳಿಸಿ ಪ್ರಥಮ ರ‍್ಯಾಂಕ್ ಪಡೆದ ಶನಿವಾರಸಂತೆಯ ಪೂರ್ವಿ ಜಗದೀಶ್ ಸೇರಿದಂತೆ ಹೆಚ್ಚು ಅಂಕಗಳಿಸಿದ ಶನಿವಾರಸಂತೆ ವ್ಯಾಪ್ತಿಯ ೨೧ ಮಂದಿ ರ‍್ಯಾಂಕ್ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯ ಹಿಂದೆ ಶಾಲೆಯ ಶಿಕ್ಷಕರ ಪರಿಶ್ರಮ, ಪೋಷಕರ ಸಹಕಾರ ಅಡಗಿರುವುದರಿಂದ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕಾಗಿರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಅಂಕ ಪಡೆದು ತೇರ್ಗಡೆಯಾಗಬೇಕಾಗುತ್ತದೆ ಈ ಮೂಲಕ ಪ್ರತಿಯೊಂದು ಕ್ಷೇತ್ರದಲ್ಲಿ ಉದ್ಯೋಗಾವಕಾಶ ಸಿಗುತ್ತದೆ ಎಂದರು. ಸಾಧಕ ವಿದ್ಯಾರ್ಥಿಗಳನ್ನು ಗ್ರಾ.ಪಂ. ಸೇರಿದಂತೆ ಸಂಘ ಸಂಸ್ಥೆಗಳ ಮೂಲಕ ಗುರುತಿಸಿ ಪುರಸ್ಕರಿಸುವದರಿಂದ ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡಲು ಮತ್ತಷ್ಟು ಸ್ಪೂರ್ತಿ ತುಂಬುತ್ತದೆ, ಇದೊಂದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಗ್ರಾ.ಪಂ. ಸದಸ್ಯ ಎಸ್.ಎನ್. ರಘು ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸರೋಜ ಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ಗೌಸ್, ಆದಿಲ್ ಪಾಷ, ಪತ್ರಕರ್ತ ಹರೀಶ್, ಪೋಷಕ ಎಸ್.ವಿ. ಜಗದೀಶ್ ಮಾತನಾಡಿದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಎಸ್.ಆರ್.ಮಧು, ಗ್ರಾ.ಪಂ.ಸರ್ವ ಸದಸ್ಯರು, ಗ್ರಾ.ಪಂ.ಪಿಡಿಓ ಮೇದಪ್ಪ, ಗ್ರಾ.ಪಂ. ಸಿಬ್ಬಂದಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ದಿನೇಶ್ ಮುಂತಾದವರಿದ್ದರು. ಸಮಾರಂಭದಲ್ಲಿ ೨೧ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಶನಿವಾರಸಂತೆ ವ್ಯಾಪ್ತಿಯ ವಿವಿಧ ಶಾಲೆಯ ಮುಖ್ಯ ಶಿಕ್ಷಕರು, ಶನಿವಾರಸಂತೆ ಸಿಆರ್‌ಪಿ ದಿನೇಶ್ ಇವರುಗಳನ್ನು ಗುರುತಿಸಿ ಗ್ರಾ.ಪಂ. ವತಿಯಿಂದ ಸನ್ಮಾನಿಸಲಾಯಿತು.