ಗೋಣಿಕೊಪ್ಪಲು, ಜೂ. ೧೬: ರೈತರ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಇತ್ತೀಚಿನ ದಿನಗಳಲ್ಲಿ ರಾಜ್ಯ ಹೆದ್ದಾರಿಗಳಲ್ಲಿ ಸಂಚರಿಸಿ ವಾಹನ ಚಾಲಕರಿಗೆ ಗಾಬರಿಯನ್ನುಂಟು ಮಾಡುತ್ತಿವೆ. ಅಲ್ಲದೆ ತನ್ನ ಆಹಾರಕ್ಕಾಗಿ ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳ ಮುಂದೆ ಇಟ್ಟಿರುವ ತರಕಾರಿ, ಹಣ್ಣು ಹಂಪಲುಗಳನ್ನು ತಿಂದು ನಂತರ ಅಲ್ಲಿದ್ದ ಆಹಾರ ಪದಾರ್ಥಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಸಮೀಪದ ಕಾಫಿ ತೋಟಕ್ಕೆ ತೆರಳುತ್ತಿವೆ.
ತಾ. ೧೬ರ ಮುಂಜಾನೆ ೪.೩೦ರ ಸುಮಾರಿಗೆ ಗೋಣಿಕೊಪ್ಪ - ದೇವರಪುರ - ತಿತಿಮತಿ ಮುಖ್ಯ ರಸ್ತೆಯ ರಾಜ್ಯ ಹೆದ್ದಾರಿ ಆಗಿರುವ ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಇತ್ತೀಚೆಗೆ ಆರಂಭಿಸಿದ ಜೈನುದ್ದೀನ್ ಎಂಬವರ ಮಳಿಗೆಗೆ ಕಾಡಾನೆಯೊಂದು ಅಂಗಡಿಯ ಮುಂಭಾಗದಲ್ಲಿ ಟಾರ್ಪಲ್‌ನಿಂದ ಮುಚ್ಚಿಟ್ಟಿದ್ದ ತರಕಾರಿಗಳನ್ನು ತಿಂದು ಹಾಕಿದೆ. ಅಲ್ಲದೆ ಉಳಿದ ತರಕಾರಿಗಳನ್ನು ಚೆಲ್ಲಾಪಿಲ್ಲಿ ಮಾಡಿ ವಾಪಸ್ಸು ತೆರಳಿದೆ. ಇದರಿಂದಾಗಿ ಈ ಭಾಗದ ನಾಗರೀಕರು ಭಯಭೀತಗೊಂಡಿ ದ್ದಾರೆ. ರಾಜ್ಯ ಹೆದ್ದಾರಿಯಲ್ಲಿ ಕೂಡ ಸಂಚರಿಸುವ ವಾಹನ ಸವಾರರಿಗೆ ಈ ರೀತಿಯ ಕಾಡಾನೆಗಳು ರಸ್ತೆ ಬದಿಯಲ್ಲಿಯೇ ಸಂಚರಿಸುತ್ತಿರುವು ದರಿಂದ ಆತಂಕ ಸೃಷ್ಟಿಯಾಗಿದೆ.
ಅರಣ್ಯ ಇಲಾಖೆಯ ವಿಶೇಷ ತಂಡಗಳು ರಾತ್ರಿ ವೇಳೆಯಲ್ಲಿ ಬೀಟ್ ಕಾರ್ಯ
(ಮೊದಲ ಪುಟದಿಂದ) ನಡೆಸುತ್ತಿದ್ದರೂ ಕಾಡಾನೆಗಳು ರಸ್ತೆಯಲ್ಲಿ ಸಂಚರಿಸುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಗಂಟೆಗಟ್ಟಲೆ ಸಲಗಗಳು ರಸ್ತೆಯಲ್ಲಿಯೇ ನಿಂತು ವಾಹನ ಸಂಚಾರಕ್ಕೆ ಅಡ್ಡಿ ಪಡಿಸುತ್ತಿವೆ. ವಾಹನ ಸವಾರರು ಈ ಮಾರ್ಗದಲ್ಲಿ ಸಂಚರಿಸುವ ವೇಳೆ ದಿನನಿತ್ಯ ಕಾಡಾನೆಗಳ ಸಮಸ್ಯೆಯನ್ನು ಎದುರಿಸುವಂತಾಗಿದೆ.
ರಸ್ತೆಯ ಎರಡು ಬದಿಗಳಲ್ಲಿ ಅರಣ್ಯ ಪ್ರದೇಶ ಹಾಗೂ ರೈತರ ಕಾಫಿ ತೋಟಗಳು, ವಿವಿಧ ಖಾಸಗಿ ಒಡೆತನದ ಕಾಫಿ ತೋಟಗಳು ಈ ಮುಖ್ಯ ರಸ್ತೆಯಲ್ಲಿ ಹೆಚ್ಚಾಗಿರುವು ದರಿಂದ ಬಹುತೇಕ ಕಾಡಾನೆಗಳು ತೋಟಗಳಲ್ಲಿಯೇ ನೆಲೆ ನಿಂತಿವೆ.ರಾತ್ರಿ ವೇಳೆಯಲ್ಲಿ ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ತೆರಳುವ ವೇಳೆ ಇಂತಹ ಅನಾಹುತಗಳು ಎದುರಾಗುತ್ತಿವೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಬಗ್ಗೆ ರಾತ್ರಿ ಹಾಗೂ ಮುಂಜಾನೆಯ ವೇಳೆಯಲ್ಲಿ ರಸ್ತೆಗಿಳಿಯುವ ಕಾಡಾನೆಗಳ ಬಗ್ಗೆ ನಿಗಾ ವಹಿಸುವಂತೆ ನಾಗರೀಕರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
-ಹೆಚ್.ಕೆ.ಜಗದೀಶ್