ಕಣಿವೆ, ಜೂ. ೧೭: ಈ ಬಾರಿ ಸಕಾಲಿಕವಾದ ಮಳೆ ಬಾರದ ಕಾರಣ ಕುಶಾಲನಗರ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಕೃಷಿಕರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕೈಗೊಂಡಿರುವ ಜೋಳದ ಬೆಳೆ ಒಣಗಲಾರಂಭಿಸಿದೆ.
ಈಗಾಗಲೇ ಹೊಲದಲ್ಲಿ ಬೆಳೆಯುತ್ತಿದ್ದ ಜೋಳದ ಬೆಳೆಯ ಗರಿಗಳು ಬಾಡುತ್ತಾ ಇರುವುದು ಕೃಷಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೊದಲೇ ಕೊರೊನಾ ಸಂಕಷ್ಟದಿAದ ಹೊರಬಾರದ ಕೃಷಿಕರು ಸಾಲ ಸೋಲ ಮಾಡಿ ಕೈಗೊಂಡಿದ್ದ ಜೋಳ, ತರಕಾರಿ ಕಾಯಿ ಪಲ್ಯೆಗಳು ಒಣಗುತ್ತಿವೆ.
ನೀರಾವರಿ ಸೌಲಭ್ಯವನ್ನು ಹೊಂದಿರುವ ಕೃಷಿಕರು ತಾವು ಬೆಳೆದಂತಹ ಕೃಷಿ ಫಸಲುಗಳಿಗೆ ನೀರು ಹಾಯಿಸುತ್ತಿದ್ದಾರೆ. ಆದರೆ ಅರೆ ನೀರಾವರಿ ಪ್ರದೇಶದ ರೈತರು ಸ್ವಾಭಾವಿಕವಾಗಿ ಸುರಿಯುವ ಮಳೆಯ ನೀರನ್ನೇ ಅವಲಂಬಿಸಿರುವ ಕಾರಣ, ಒಂದೆರಡು ದಿನಗಳಲ್ಲಿ ಮಳೆ ಬಂದು ಸುರಿದರೆ ಮಾತ್ರ ಕೃಷಿಕರಿಗೆ ಒಂದಿಷ್ಟು ಸಮಾಧಾನವಾಗುತ್ತದೆ. ಇಲ್ಲವಾದಲ್ಲಿ ಸಾವಿರಾರು, ಲಕ್ಷಾಂತರ ರೂ.ಗಳನ್ನು ವ್ಯಯಿಸಿ ಕೈಗೊಂಡಿರುವ ಬೆಳೆ ಒಣಗಿದರೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗುವ ಆತಂಕದಲ್ಲಿ ರೈತರು ಮಳೆರಾಯನಿಗೆ ಎದುರು ನೋಡುತ್ತಿದ್ದಾರೆ.