ಸಿದ್ದಾಪುರ, ಜೂ. ೧೫: ಮಾಲ್ದಾರೆಯಲ್ಲಿ ವೃದ್ಧ ದಂಪತಿಯ ಮನೆಗೆ ನುಗ್ಗಿ ದರೋಡೆ ಮಾಡಿದ ಘಟನೆ ಮಾಸುವ ಮುನ್ನ ಇದೀಗ ಪಾಲಿಬೆಟ್ಟದ ಹೊಸೂರು ಗ್ರಾಮದಲ್ಲಿ ವೃದ್ಧ ದಂಪತಿ ಮನೆಗೆ ಹಾಡಹಗಲೇ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರಾಭರಣ ಹಾಗೂ ಚಿನ್ನಾಭರಣ ದೋಚಿದ್ದಾರೆ.

ಪಾಲಿಬೆಟ್ಟ ಸಮೀಪದ ಹೊಸೂರು ಗ್ರಾಮದ ಕೂತಂಡ ಸುಬ್ಬಯ್ಯ ಹಾಗೂ ಪುಷ್ಪ ದಂಪತಿ ಮನೆಯಲ್ಲಿ ಕಳ್ಳತನ ನಡೆದಿದೆ. ತಾ. ೧೨ರ ಮಧ್ಯಾಹ್ನ ಅಂದಾಜು ೧ ಗಂಟೆಯ ಸಮಯಕ್ಕೆ ವೃದ್ಧ ದಂಪತಿ ಕೆಲಸದ ನಿಮಿತ್ತ ಪಾಲಿಬೆಟ್ಟ ಪಟ್ಟಣಕ್ಕೆ ತೆರಳಿದ ಸಂದರ್ಭ ಘಟನೆ ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಕಳ್ಳರು ಮನೆಯ ಮುಂಭಾಗದ ಬೀಗ ಮುರಿದು ಮನೆಯ ಒಳಕ್ಕೆ ನುಗ್ಗಿದ್ದಾರೆ. ನಂತರ ದಂಪತಿಯ ಕೋಣೆಯ ಬೀಗ ತೆಗೆದು ಅಲ್ಲಿದ್ದ ಅಲ್ಮಾರದ ಬೀಗ ಮುರಿದು ರೂ. ೧೦ ಲಕ್ಷ ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಇದಲ್ಲದೇ ಪೀಚೆಕತ್ತಿ, ಮೊಬೈಲ್ ಕೂಡ ಕಳ್ಳತನವಾಗಿದೆ.

ಈರ್ವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಸುಬ್ಬಯ್ಯ ರವರು ಹೆಚ್.ಎ.ಎಲ್. ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಕಳೆದ ೧೪ ತಿಂಗಳ ಹಿಂದೆ ನಿವೃತ್ತಿ ಹೊಂದಿ ಹೊಸೂರು ಗ್ರಾಮದಲ್ಲಿ ವಾಸಿಸುತ್ತಿದ್ದರು. ಬೆಂಗಳೂರಿನಿAದ ಬರುವ ಸಂದರ್ಭ ಬ್ಯಾಂಕ್ ಲಾಕರ್‌ನಲ್ಲಿ ಇರಿಸಿದ್ದ ಆಭರಣಗಳನ್ನು ಹೊಸೂರು ಗ್ರಾಮದ ಮನೆಗೆ ತಂದಿಟ್ಟಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಕೇವಲ ಒಂದು ಗಂಟೆಯ ಸಮಯದೊಳಗೆ ಪಟ್ಟಣಕ್ಕೆ ಹೋಗಿ ಬರುವಷ್ಟರಲ್ಲಿ ಈ ರೀತಿ ಕಳ್ಳತನ ನಡೆದಿರುವುದು ಗ್ರಾಮದಲ್ಲಿ ಆತಂಕ ಸೃಷ್ಟಿ ಮಾಡಿದೆ.

(ಮೊದಲ ಪುಟದಿಂದ) ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಮೋಹನ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಒಂದು ವಾರದೊಳಗೆ ಎರಡು ಪ್ರಕರಣಗಳು ಸಿದ್ದಾಪುರ ಠಾಣೆಯಲ್ಲಿ ದಾಖಲಾಗಿದೆ.

ಏನೆಲ್ಲ ಕಳವಾಗಿದೆ?: ಡೈಮೆಂಡ್ ನೆಕ್ಲೆಸ್, ವಜ್ರದ ಓಲೆ, ೧೨ ಗ್ರಾಂನ ಕೊಕ್ಕೆ ತಾತಿ, ೬ ಹಾಗೂ ೩೨ ಗ್ರಾಂನ ಕರಿಮಣಿಗಳು, ೪೦ ಗ್ರಾಂನ ಬಳೆಗಳು, ೧೨ ಗ್ರಾಂ ಕಡಗ, ೧೫ ಗ್ರಾಂನ ಡಿಸೈನರ್ ಬಳೆ, ೩೬ ಗ್ರಾಂನ ೩ ಚಿನ್ನದ ಸರಗಳು, ೧೨ ಹಾಗೂ ೮ ಗ್ರಾಂನ ಪತ್ತಾಕ್, ೮ ಗ್ರಾಂನ ಚಿನ್ನದ ನೆಕ್ಲೆಸ್, ೪೦ ಸಾವಿರ ಮೌಲ್ಯದ ಪೀಚೆಕತ್ತಿ ಸೇರಿದಂತೆ ಮೊಬೈಲ್, ವಾಚ್, ಎಟಿಎಂ ಕಳ್ಳತನವಾಗಿದೆ.

ತಂಡ ರಚನೆ: ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ವಾಸ ಮಾಡಿಕೊಂಡಿರುವ ವೃದ್ಧ ದಂಪತಿ ವಾಸಿಸುವ ಮನೆಗಳನ್ನು ಕಳ್ಳರು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದಾರೆ. ಒಂದು ವಾರದೊಳಗೆ ದರೋಡೆ ಹಾಗೂ ಕಳ್ಳತನ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಕಳ್ಳರನ್ನು ಬಂಧಿಸಲು ಪೊಲೀಸರ ಎರಡು ತಂಡಗಳನ್ನು ರಚಿಸಲಾಗಿದೆ. ಪೊಲೀಸರು ಬಿರುಸಿನ ತನಿಖೆ ಕೈಗೊಂಡಿದ್ದಾರೆ. ವೃದ್ಧ ದಂಪತಿಗಳ ಚಲನವಲನವನ್ನು ಕಂಡು ಹಿಡಿದು ಕಳ್ಳತನಕ್ಕೆ ಹೊಂಚು ಹಾಕಿ ಈ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ವರದಿ: ವಾಸು ಎ.ಎನ್.