*ಸಿದ್ದಾಪುರ, ಜೂ. ೧೫: ನೆಲ್ಯಹುದಿಕೇರಿ ನಲ್ವತ್ತೆಕರೆ ಭಾಗದಲ್ಲಿ ಕಾವೇರಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದ್ದು, ವಾಲ್ನೂರು - ತ್ಯಾಗತ್ತೂರು, ನೆಲ್ಯಹುದಿಕೇರಿ ಗ್ರಾಮಸ್ಥರೇ ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳೆದ ೨ ತಿಂಗಳಿನಿAದ ನಲ್ವತ್ತೆಕರೆ ಪ್ರದೇಶದಿಂದ ಕೆ.ಆರ್.ನಗರ ಮತ್ತಿತರೆಡೆಗೆ ಅಕ್ರಮವಾಗಿ ಮರಳು ಸಾಗಾಟವಾಗುತ್ತಿದೆ. ಮಾಲ್ದಾರೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದರೂ ನಿರಂತರವಾಗಿ ಮರಳು ದಂಧೆ ನಡೆಯುತ್ತಿದೆ. ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಗ್ರಾಮಸ್ಥರೇ ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಬೇಕಾಯಿತು. ರಾತ್ರಿ ವೇಳೆ ಮರಳು ಸಾಗಾಟವಾಗುತ್ತಿದ್ದು, ಲಾರಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಹಿಟಾಚಿ ಯಂತ್ರ ಮತ್ತು ಅಕ್ರಮವಾಗಿ ತೆಗೆದಿರುವ ಮರಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲವೆAದು ಸ್ಥಳೀಯರು ಆರೋಪಿಸಿದ್ದಾರೆ.
ಮಧ್ಯರಾತ್ರಿಯಲ್ಲಿ ಅಕ್ರಮ ಮರಳುದಂಧೆ ನಡೆಯುತ್ತಿದ್ದು, ನೆಲ್ಯಹುದಿಕೇರಿಯ ವಿವಿಧ ಪ್ರದೇಶಗಳಲ್ಲಿ ಇದು ನಿರಂತರವಾಗಿದೆ. ನಿಯಮ ಬಾಹಿರ ಮರಳುಗಾರಿಕೆಯ ಹಿಂದೆ ಮರಳು ಮಾಫಿಯಾ ಕೆಲಸ ಮಾಡುತ್ತಿದೆ ಎನ್ನುವ ಸಂಶಯ ವ್ಯಕ್ತವಾಗಿದೆ.
ಅನಾಹುತ ಸಂಭವಿಸುವ ಮೊದಲು ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಮರಳುಗಾರಿಕೆಗೆ ಬಳಸಿದ ಹಿಟಾಚಿ ವಾಹನ ಸೇರಿದಂತೆ ಎಲ್ಲಾ ಯಂತ್ರಗಳನ್ನು ಮತ್ತು ಅಕ್ರಮವಾಗಿ ತೆಗೆದಿರುವ ಮರಳನ್ನು ವಶಕ್ಕೆ ಪಡೆಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
-ಅಂಚೆಮನೆ ಸುಧಿ