ವೀರಾಜಪೇಟೆ, ಜೂ. ೧೫: ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಏಳಿಗೆಗಾಗಿ ಸರಕಾರದ ವತಿಯಿಂದ ನೀಡಲಾಗುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಮುಬೀನ ಕೌಸರ್ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆಯ ಐ.ಕ್ಯೂ.ಎ.ಸಿ. ಮತ್ತು ಅಲ್ಪಸಂಖ್ಯಾತ ಸಮಿತಿಯ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ನಡೆದ “ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಿರುವ ಯೋಜನೆಗಳು” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಬೀನ ಕೌಸರ್, ಸರ್ಕಾರ ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಸರ್ಕಾರ ಬಡ ಮಕ್ಕಳು, ಹಿಂದುಳಿದ ವರ್ಗದ ಮಕ್ಕಳು ಮತ್ತು ಅಲ್ಪಸಂಖ್ಯಾತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ಹಲವು ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ನೀಡುತ್ತದೆ. ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ವೃತ್ತಿಪರ ಕೋರ್ಸ್ಗಳು ಮತ್ತು ತಾಂತ್ರಿಕ ಕೋರ್ಸ್ಗಳನ್ನು ಓದುತ್ತಿರುವ ವಿದ್ಯಾರ್ಥಿಗಳು ಕೂಡ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ. ಪೋಸ್ಟ್ ಮೆಟ್ರಿಕ್ ಮತ್ತು ಮೆರಿಟ್ ಕಮ್ ಮೀನ್ಸ್ನಲ್ಲಿ ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾಲೇಜು ಶುಲ್ಕ ಮರುಪಾವತಿ ಮಾಡಲಾಗುತ್ತದೆ ಎಂದರಲ್ಲದೆ ವಿದ್ಯಾರ್ಥಿಗಳಿಗೆ ಸರಕಾರವು ನೀಡುತ್ತಿರುವ ಹಲವಾರು ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ ಕೆ.ಸಿ. ಮಾತನಾಡಿದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯೆ ತಸ್ಲೀಂ ಅಕ್ತರ್, ಐ.ಕ್ಯೂ.ಎ.ಸಿ. ಸಂಚಾಲಕ ವೇಣುಗೋಪಾಲ್ ಹೆಚ್.ಎಸ್., ಅಲ್ಪಸಂಖ್ಯಾತ ಸಮಿತಿಯ ಸಂಚಾಲಕಿ ಸುಮಯ್ಯ ತಬಸ್ಸುಮ್ ಉಪಸ್ಥಿತರಿದ್ದರು.