ಶನಿವಾರಸಂತೆ, ಜೂ. ೧೪: ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಒಲವು ಹಾಗೂ ಓದುವ ಅಭಿರುಚಿ ಮೂಡಿಸಿದರೆ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳಕು ಎಲ್ಲೆಡೆ ಹರಡುತ್ತದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹಾಗೂ ಮಾರ್ಗದರ್ಶಕ ಟಿ.ಪಿ. ರಮೇಶ್ ಅಭಿಪ್ರಾಯಪಟ್ಟರು.

ಸ್ಥಳೀಯ ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಸಾಪ ಶನಿವಾರಸಂತೆ ಹೋಬಳಿ ಘಟಕದ ನೂತನ ಸಾಲಿನ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಾನಸಿಕವಾಗಿ, ಕುಟುಂಬ ಪದ್ಧತಿಯಲ್ಲಿ ವ್ಯವಹಾರ ದೃಷ್ಟಿಯಿಂದ ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಪ್ರೇಮ ಮೂಡಿಸಿ, ಓದುವ ಅಭಿರುಚಿ ಬೆಳೆಸಬೇಕು. ಶಿಕ್ಷಕ ಸಾಹಿತ್ಯ ಪ್ರೇಮಿಯಾಗಿದ್ದರೆ ವಿದ್ಯಾರ್ಥಿಗಳಲ್ಲೂ ಭಾಷೆ, ಸಾಹಿತ್ಯದ ಬಗ್ಗೆ ಆಸಕ್ತಿ, ಒಲವು ಮೂಡುತ್ತದೆ. ಹಿರಿಯ ಖ್ಯಾತ ಸಾಹಿತಿಗಳ ಸಂಪರ್ಕ ಮಕ್ಕಳಿಗೆ ಸ್ಫೂರ್ತಿ. ಕನ್ನಡ ಸಾಹಿತ್ಯ ಪರಿಷತ್ ವಿಕೇಂದ್ರೀಕರಣಗೊAಡು ಗ್ರಾಮ ಪಂಚಾಯಿತಿ ಮಟ್ಟದವರೆಗೆ ವ್ಯಾಪಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕಸಾಪ ಜಿಲ್ಲಾ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಶ್ರೀಮಂತ ಭಾಷೆ ಕನ್ನಡವನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ಕೇವಲ ಸಾಹಿತ್ಯ ಪರಿಷತ್ತಿನದಾಗದೇ ಪ್ರತಿ ಕನ್ನಡಿಗನದಾಗಬೇಕು. ಜಿಲ್ಲೆಯ ೭ ಲಕ್ಷ ಕನ್ನಡಿಗರಲ್ಲಿ ೨ ಸಾವಿರ ಕಸಾಪ ಸದಸ್ಯರಿದ್ದಾರೆ. ಜಾತಿ-ಮತ, ಧರ್ಮದ ಭೇದವಿಲ್ಲದೆ ಸದಸ್ಯತ್ವ ಆಂದೋಲನಕ್ಕೆ ಜುಲೈನಲ್ಲಿ ಚಾಲನೆ ನೀಡಲಾಗುವುದು. ರೂ. ೨೫೦ ಶುಲ್ಕದೊಂದಿಗೆ ೫ ಲಕ್ಷ ಸದಸ್ಯರ ನೋಂದಾವಣೆ ಮಾಡುವ ಗುರಿಯಿದೆ. ಹಿರಿಯರ ಸ್ಮರಣೆಗೆ ದತ್ತಿನಿಧಿ ಸ್ಥಾಪನೆಯೇ ಕಸಾಪದ ಜೀವಾಳ ಎಂದರು. ಮುಖ್ಯ ಅತಿಥಿ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಮಾತನಾಡಿ, ಮುಂದಿನ ಪೀಳಿಗೆಗೆ ಕನ್ನಡ ಭಾಷೆ, ಸಾಹಿತ್ಯ ತಲುಪಿಸುವಂತಹ ಕಾರ್ಯ ಕ್ರಮಗಳನ್ನು ಕಸಾಪ ಹಮ್ಮಿಕೊಳ್ಳಬೇಕು. ಗ್ರಂಥಾಲಯದ ಬಗ್ಗೆ, ಉತ್ತಮ ಕನ್ನಡ ಪುಸ್ತಕಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಒಲವು ಮೂಡಿಸಬೇಕು ಎಂದು ಕರೆ ನೀಡಿದರು.

ಪಟ್ಟಣದಲ್ಲಿರುವ ಹಳೆಯ ಪೊಲೀಸ್ ಠಾಣೆಯನ್ನು ಕಸಾಪ ಕಚೇರಿಗೆ ಬಿಟ್ಟುಕೊಡುವಂತೆ ಹೋಬಳಿ ಘಟಕದ ನಿಕಟ ಪೂರ್ವ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ ಸಮಾರಂಭದಲ್ಲಿ ಮನವಿ ಮಾಡಿದಾಗ, ತಾತ್ಕಾಲಿಕವಾಗಿ ಬಿಟ್ಟುಕೊಡುವುದಾಗಿ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಭರವಸೆ ನೀಡಿದರು.

ಜಿಲ್ಲಾ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನೂತನ ಸಾಲಿನ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ. ನಾಗರಾಜ್ ಅವರಿಗೆ ನಿಕಟ ಪೂರ್ವ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ನೂತನ ಅಧ್ಯಕ್ಷ ಬಿ.ಬಿ. ನಾಗರಾಜ್, ತಾಲೂಕು ಘಟಕದ ಪದಾಧಿಕಾರಿಗಳಾದ ಎಚ್.ಬಿ. ಜಯಮ್ಮ ಹಾಗೂ ಕೆ.ಪಿ. ಜಯಕುಮಾರ್ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಮಾತನಾಡಿ, ಹಿರಿಯ ಇಚ್ಛಾಶಕ್ತಿ ಕಿರಿಯರಿಗೆ ಮಾರ್ಗದರ್ಶನ ವಾಗಬೇಕು. ಶಾಲೆಗೊಂದು, ಕಾಲೇಜಿಗೊಂದು ಕಾರ್ಯಕ್ರಮ ಆಯೋಜಿಸಿ ಕನ್ನಡ ಭಾಷಾಭಿಮಾನ ಬೆಳೆಸಬೇಕು ಎಂದರು.

ಜಿಲ್ಲಾ ಕಸಾಪ ಕಾರ್ಯದರ್ಶಿ ರೇವತಿ ರಮೇಶ್, ಕೋಶಾಧಿಕಾರಿ ಮುನೀರ್ ಅಹಮ್ಮದ್, ತಾಲೂಕು ಕಾರ್ಯದರ್ಶಿ ವೀರರಾಜು, ಪದಾಧಿಕಾರಿಗಳಾದ ಶಾಂತಳ್ಳಿ ನಾಗರಾಜ್, ಕೊಡ್ಲಿಪೇಟೆ ಶಾಂತಮಲ್ಲಪ್ಪ, ಶ್ರೀಧರಹೂವಳ್ಳಿ, ನಂಜಪ್ಪ, ಎಂ.ಪಿ. ಮೋಹನ್, ಶಶಿಕಲಾ, ಪ್ರಕಾಶ್ಚಂದ್ರ, ನಯನತಾರಾ, ಕಾವೇರಿ ಕಾಲೇಜು ಪ್ರಾಂಶುಪಾಲ ದೇವರಾಜ್, ಉಪನ್ಯಾಸಕ ಎಸ್.ಎ. ಕಾಂತರಾಜ್, ಜಾನಕಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಜಾಸ್ಮಿಯಾ ತಂಡದವರು ಪ್ರಾರ್ಥಿಸಿದರು, ಧೃತಿ ತಂಡದವರು ನಾಡಗೀತೆ ಹಾಡಿದರು. ಕಾಂತರಾಜ್ ನಿರೂಪಿಸಿ, ಜಯಮ್ಮ ವಂದಿಸಿದರು.