ಸಿದ್ದಾಪುರ, ಜೂ ೧೩: ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಒದಗಿಸಿಕೊಡಬೇಕೆಂದು ಒತ್ತಾಯಿಸಿ ಸಿ.ಪಿ.ಐ(ಎಂ) ಪಕ್ಷದ ವತಿಯಿಂದ ಸಿದ್ದಾಪುರದ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಿ.ಪಿ.ಐ(ಎಂ) ಪಕ್ಷದ ಕಾರ್ಯದರ್ಶಿ ಹೆಚ್.ಬಿ ರಮೇಶ್ ಮಾತನಾಡಿ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾವಿರಾರು ಮಂದಿ ನಿವೇಶನ ರಹಿತರಿದ್ದು ಇವರುಗಳಿಗೆ ಪಂಚಾಯಿತಿ ನಿವೇಶನ ಕೊಡಿಸುವಲ್ಲಿ ವಿಫಲವಾಗಿದೆ. ಅಲ್ಲದೇ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಸಂತ್ರಸ್ತರಿಗೂ

ಪುನರ್ವಸತಿ ಕಲ್ಪಿಸಿಕೊಡದೇ ಪಂಚಾಯಿತಿ ನಿರ್ಲಕ್ಷö್ಯ ವಹಿಸುತ್ತಿದೆ ಎಂದು ಆರೋಪಿಸಿದರು. ಪಂಚಾಯಿತಿ ಆಡಳಿತ ಮಂಡಳಿಯ ನಿರ್ಲಕ್ಷö್ಯವನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಪಂಚಾಯಿತಿ ಎದುರು ಗುಡಿಸಲು ಹಾಕಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಸಿ.ಪಿ.ಐ(ಎಂ) ಗ್ರಾಮ ಸಮಿತಿ ಕಾರ್ಯದರ್ಶಿ ವೈಜು ಮಾತನಾಡಿ, ಜನಪ್ರತಿನಿಧಿಗಳು ನಿವೇಶನರಹಿತರಿಗೆ ನಿವೇಶನ ಒದಗಿಸಿಕೊಡುವ ಬಗ್ಗೆ ಆಸಕ್ತಿ ವಹಿಸದೇ ಅನಗತ್ಯ ಚರ್ಚೆ ಮಾಡುತ್ತಾ ದಿನದೂಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕ ಮುಖಂಡ ಎನ್.ಡಿ ಕುಟ್ಟಪ್ಪನ್ ಮಾತನಾಡಿ ಸಿದ್ದಾಪುರ ಗ್ರಾ.ಪಂ.ನ ೨೫ ಮಂದಿ ಸದಸ್ಯರುಗಳು ಯಾವುದೇ ಸಭೆಗಳಲ್ಲಿ ನಿವೇಶನ ರಹಿತರ ಸಮಸ್ಯೆಗಳ ಬಗ್ಗೆ ಚಕಾರ ಎತ್ತದೇ ಮೌನ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಿ.ಡಿ.ಓ ಮನ ಮೋಹನ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಿ.ಪಿ.ಐ(ಎಂ) ಪಕ್ಷದ ಪದಾಧಿಕಾರಿಗಳಾದ ಅನಿಲ್, ಎನ್.ಕೆ ಮುಸ್ತಫಾ ಇನ್ನಿತರರು ಹಾಜರಿದ್ದರು.