ವೀರಾಜಪೇಟೆ, ಜೂ. ೧೩: ಕಾಫಿಯನ್ನು ಕೇಂದ್ರ ಸರಕಾರವೇ ಖರೀದಿ ಮಾಡಿ ಉತ್ತಮ ಅಂರ್ರಾಷ್ಟಿçÃಯ ಮಟ್ಟದ ಮಾರುಕಟ್ಟೆಯನ್ನು ಒದಗಿಸಬೇಕು ಎಂದು ಕೊಡಗೂ ಕಿಸಾನ್ ಸಭಾ ಘಟಕದ ಮುಖಂಡ ಡಾ. ದುರ್ಗಾಪ್ರಸಾದ್ ಆಗ್ರಹಿಸಿದರು.
ವೀರಾಜಪೇಟೆ ದರ್ಶನ್ ಆರ್ಕಿಡ್ ಸಭಾಂಗಣದಲ್ಲಿ ಭಾರತ ಕಿಸಾನ್ ಸಭಾ ಪ್ರಾಂತ ರೈತ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಒಂದೆಡೆ ಬೆಳೆಗಾರರು ಬೆಲೆ ಏರಿಳಿತದಿಂದ ನಷ್ಟ ಅನುಭವಿಸುತ್ತಿದ್ದಾರೆ. ಜೊತೆಗೆ ಬೆಳೆಗಾರರಿಗೆ ಉತ್ತಮ ದರ ನೀಡದೆ ಅನ್ಯರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ವನ್ಯ ಜೀವಿಗಳ ಹಾವಳಿಯಿಂದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕೊಡಗಿನಲ್ಲಿ ಉತ್ತಮ ಗುಣಮಟ್ಟದ ಕಾಳುಮೆಣಸು ಬೆಳೆದರೂ ಸಹ ಹೊರಗಿನಿಂದ ಬರುವ ಕಾಳುಮೆಣಸಿನಿಂದಾಗಿ ಉತ್ತಮ ದರ ಸಿಗದೆ ಕಂಗಾಲಾಗಿದ್ದಾರೆ. ಅದೇ ರೀತಿ ಅಡಿಕೆ ಸಹ ಹೊರಗಿನಿಂದ ಕಳ್ಳಸಾಗಣೆ ಮೂಲಕ ಭಾರತಕ್ಕೆ ಬರುತ್ತಿದ್ದು ಇಲ್ಲಿನ ಬೆಳೆಗಾರರಿಗೆ ಸೂಕ್ತ ದರ ಸಿಗುತ್ತಿಲ್ಲ. ಮೆಣಸು ಮತ್ತು ಅಡಿಕೆ ಮಣಿಪುರದ ಮೂಲಕ ಬಾಂಗ್ಲಾ ಗಡಿ ಮತ್ತಿತರ ಕಡೆಯಿಂದ ಕಳ್ಳಸಾಗಾಣಿಕೆಯಲ್ಲಿ ಬರುತ್ತಿದ್ದು, ಇದರ ಗುಣಮಟ್ಟ ಕಳಪೆಯಾಗಿದೆ. ಇದನ್ನು ಕೇಂದ್ರ ಸರಕಾರ ಕಟ್ಟು ನಿಟ್ಟಾಗಿ ನಿರ್ಬಂಧಿಸಬೇಕು. ದೇಶದ ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕು. ಕೊಡಗಿನಲ್ಲಿ ಉಳ್ಳವರು ಸರಕಾರಿ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಈಗ ಸರಕಾರ ಇದನ್ನು ಮರಳಿಪಡೆಯದೆ ಗುತ್ತಿಗೆ ನೀಡಲು ಹೊರಟಿದೆ. ಆದರೆ ಇದೇ ಕೊಡಗಿನಲ್ಲಿ ತಲತಲಾಂತರದಿAದ ವಾಸಿಸುತ್ತಿರುವ ಪರಿಶಿಷ್ಟ ಪಂಗಡ ಮತ್ತು ವರ್ಗದವರಿಗೆ ಸರಕಾರಿ ಜಾಗವನ್ನು ಖಾಲಿ ಮಾಡುವಂತೆ ಸೂಚಿಸುತ್ತಿರುವುದು ವಿಪರ್ಯಾಸ ಎಂದರು. ಐದು ರಾಜ್ಯಗಳಿಗೆ ಮಾರಕವಾದ ಕಸ್ತೂರಿರಂಗನ್ ವರದಿ ತಿರಸ್ಕಾರ ಆಗಬೇಕು ಎಂದು ಒತ್ತಾಯಿಸಿದರು.
ಸಮಾರಂಭದಲ್ಲಿ ಮಡಿಕೇರಿಯ ಕಾಫಿ ಮಂಡಳಿಯ ಉಪನಿರ್ದೇಶಕ ಶಿವಕುಮಾರಸ್ವಾಮಿ, ಕಾಫಿ ಬೆಳೆಯ ಕುರಿತು ಮಾಹಿತಿಯಿತ್ತರು. ವಿಚಾರ ಸಂಕಿರಣದಲ್ಲಿ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಅಖಿಲ ಭಾರತ ಕಿಸಾನ್ ಸಭಾದ ಖಜಾಂಚಿ ಕೃಷ್ಣಪ್ರಸಾದ್, ಸದಸ್ಯರಾದ ಬಿಜು, ಕೃಷ್ಣನ್, ನಿಧೀಶ್, ಕರ್ನಾಟಕ ಕಿಸಾನ್ ಸಭಾದ ಅಧ್ಯಕ್ಷ ಬೈರಾರೆಡ್ಡಿ, ಜಿಲ್ಲಾ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಬು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಕಾಫಿ ಬೆಳೆಗಾರರ ಕೊಡುಗೆ ಅಪಾರ
ಕಾಫಿ ಬೆಳೆ ಕೇವಲ ಒಂದು ಬೆಳೆ ಮಾತ್ರವಲ್ಲ. ಕೊಡಗಿನಲ್ಲಿ ಕಾಫಿ ಬೆಳೆಯಿರದಿದ್ದರೇ ಪ್ರಕೃತಿ ಉಳಿಯುತ್ತಿರಲಿಲ್ಲ. ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತಿರಲಿಲ್ಲ. ಕಾವೇರಿ ನದಿ ಹರಿದು ಇಡೀ ದಕ್ಷಿಣ ಭಾರತವನ್ನು ಸಮೃದ್ಧಿಯಾಗಿ ಇಟ್ಟಿರುವುದರ ಹಿಂದೆ ಕೊಡಗಿನ ಕಾಫಿ ಬೆಳೆಗಾರರ ಕೊಡುಗೆಯೂ ಇದೆ ಎಂದು ಸಣ್ಣ ಬೆಳೆಗಾರರ ಸಂಘದ ಪ್ರಮುಖ ನಂದಾ ಸುಬ್ಬಯ್ಯ ಅಭಿಪ್ರಾಯಪಟ್ಟರು. ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾನವ ಸಂಪನ್ಮೂಲದ ಕೊರತೆ, ಕೂಲಿಕಾರ್ಮಿಕರಿಗೆ ಸಂಬಳದ ಸಮಸ್ಯೆ ಎಲ್ಲವೂ ಇದೆ. ಮುಖ್ಯವಾಗಿ ಇಂದಿನ ಯುವಪೀಳಿಗೆಗೆ ಇಲ್ಲಿ ನೆಲೆಸಿ ಕೃಷಿ ಮಾಡಲು ಮನಸಿಲ್ಲ. ಅವರು ನಗರಗಳತ್ತ ಮುಖ ಮಾಡುತ್ತಿದ್ದು, ಯುವ ಪೀಳಿಗೆಯನ್ನು ಕೃಷಿಯತ್ತ ಸೆಳೆಯುವ ಕೆಲಸವಾಗಬೇಕು ಎಂದರು.
ರೈಲ್ವೆ ಯೋಜನೆ ಕೊಡಗಿಗೆ ಬಂದರೆ ಇಲ್ಲಿನ ಆರ್ಥಿಕತೆಯಲ್ಲಿ ಖಂಡಿತ ಚೇತರಿಕೆ ಕಂಡುಬರುತ್ತದೆ. ಪ್ರಕೃತಿಗೆ ಇಷ್ಟೆಲ್ಲಾ ಕೊಡುಗೆ ಕೊಡುತ್ತಿರುವ ಕಾಫಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಸರ್ಕಾರಗಳು ಗಂಭೀರವಾಗಿ ಚಿಂತಿಸಲೇಬೇಕಿದೆ ಎಂದು ಅವರು ಒತ್ತಾಯಿಸಿದರು.
ಕಾಫಿ ಬೆಳೆಗಾರರ ಆದಾಯವನ್ನು ಹೆಚ್ಚಿಸುವ ಕುರಿತ ಮಾರ್ಗೋಪಾಯಗಳ ಬಗ್ಗೆ ಅಖಿಲ ಭಾರತ ಕಿಸಾನ್ ಸಭಾದ ಖಜಾಂಚಿ ಪಿ. ಕೃಷ್ಣಪ್ರಸಾದ್ ಮಾಹಿತಿ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಎ.ಐ.ಕೆ.ಎಸ್.ನ ಜಂಟಿ ಕಾರ್ಯದರ್ಶಿ ವಿಜು ಕೃಷ್ಣನ್ ಪ್ರಾಸ್ತವಿಕವಾಗಿ ಮಾತನಾಡಿದರು. ಎ.ಐ.ಕೆ.ಎಸ್. ಕಾಮ್ರೇಡ್ ನವೀನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎ.ಐ.ಕೆ.ಎಸ್. ಕೊಡಗು ಘಟಕದ ಡಾ. ದುರ್ಗಾ ಪ್ರಸಾದ್ ವೇದಿಕೆಯಲ್ಲಿದ್ದರು. ಅಬ್ದುಲ್ ಲತೀಫ್ ವಂದಿಸಿದರು.