ಸೋಮವಾರಪೇಟೆ, ಜೂ. ೧೩: ಪಟ್ಟಣದ ಮನೆಯೊಂದರಲ್ಲಿ ೧೬೫೦ ಕೆ.ಜಿ. ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನಿರಿಸಿಕೊಂಡಿದ್ದು, ಆಹಾರ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸರ್ಕಾರದಿಂದ ಬಡವರಿಗೆ ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆಯ ಪಡಿತರವನ್ನು ಅಕ್ರಮವಾಗಿ ದಾಸ್ತಾನಿರಿಸಿ ಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಇಲಾಖೆಯ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಪಟ್ಟಣದ ಜನತಾ ಕಾಲೋನಿಯ ಪುಟ್ಟಣ್ಣ ಎಂಬವರ ಮನೆಯೊಳಗೆ ಸಂಗ್ರಹಿಸಿಟ್ಟಿದ್ದ ೧೬೫೦ ಕೆ.ಜಿ. ಅಕ್ಕಿಯನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಅದನ್ನು ಎಪಿಎಂಸಿ ಗೋದಾಮಿನಲ್ಲಿ ದಾಸ್ತಾನಿರಿಸಿ, ಅಕ್ರಮದಲ್ಲಿ ಭಾಗಿಯಾಗಿರುವವರಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ಅಕ್ರಮ ಬಿಪಿಎಲ್ ಕಾರ್ಡ್ಗಳನ್ನು ಕಂಡು ಹಿಡಿದು ಅಮಾನ್ಯ ಮಾಡುವ ಕಾರ್ಯವು ಆಹಾರ ಇಲಾಖೆಯಿಂದ ಪ್ರಗತಿಯಲ್ಲಿರುವ ನಡುವೆಯೇ, ಬಿಪಿಎಲ್ ಕಾರ್ಡ್ ಮೂಲಕ ಅಕ್ಕಿಯನ್ನು ಪಡೆದು ಅದನ್ನು ಹಣಕ್ಕಾಗಿ ಮಾರಿಕೊಳ್ಳುತ್ತಿರುವ ‘ಶ್ರೀಮಂತ ಬಿಪಿಎಲ್’

(ಮೊದಲ ಪುಟದಿಂದ) ಕಾರ್ಡ್ದಾರರ ಅಸಲೀಯತ್ತು ಸಹ ಇದೀಗ ಬಹಿರಂಗಗೊAಡAತಾಗಿದೆ.

ದೇಶದ ಬಡ ಮಂದಿ ಆಹಾರದ ಕೊರತೆಯಿಂದ ನರಳಬಾರದು. ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಸರ್ಕಾರವು ಬಿಪಿಎಲ್ ಕಾರ್ಡ್ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಅಕ್ಕಿ ವಿತರಿಸುತ್ತಿದೆ. ಈ ಅಕ್ಕಿಯನ್ನು ಬಿಪಿಎಲ್ ಸೋಗಿನಲ್ಲಿರುವ ಶ್ರೀಮಂತರು ನ್ಯಾಯಬೆಲೆ ಅಂಗಡಿಯಿAದ ಪಡೆದು ಅದನ್ನು ಕೆ.ಜಿ.ಯೊಂದಕ್ಕೆ ೧೦ ರೂಪಾಯಿಯಂತೆ ಮಾರಾಟ ಮಾಡುವ ಮೂಲಕ ಉಚಿತ ಅಕ್ಕಿಯಿಂದಲೂ ಹಣ ಸಂಪಾದನೆಯ ದಾರಿ ಹುಡುಕಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪಟ್ಟಣದ ನ್ಯಾಯಬೆಲೆ ಅಂಗಡಿಗಳ ಮೂಲಕ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ದಾರರಿಗೆ ಪ್ರತಿ ತಿಂಗಳು ಅಕ್ಕಿಯನ್ನು ವಿತರಿಸಲಾಗುತ್ತಿದೆ. ಕುಟುಂಬದ ಪ್ರತಿ ಸದಸ್ಯನಿಗೂ ತಲಾ ೧೦ ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇಂತಹ ಅಕ್ಕಿಯನ್ನು ಕೆಲವರು ಸ್ಥಳೀಯ ವ್ಯಕ್ತಿಗೆ ಕೆ.ಜಿ.ಗೆ ೧೦ ರೂಪಾಯಿಯಂತೆ ಮಾರಾಟ ಮಾಡಿದ್ದಾರೆ. ಈ ಅಕ್ಕಿಯನ್ನು ಕೆ.ಜಿ.ಗೆ ೧೨ ರೂಪಾಯಿಯಂತೆ ಕೊಣನೂರಿನ ವ್ಯಕ್ತಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಪ್ರತಿ ಸೋಮವಾರ ಕೊಣನೂರಿನಿಂದ ಸೋಮವಾರಪೇಟೆಯ ಸಂತೆಗೆ ಬೆಲ್ಲ, ಸಕ್ಕರೆ, ಕಾಯಿ ತರುವ ಕ್ಯಾಂಟರ್ ವಾಹನದಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ತುಂಬಿಸಿ ಕಳುಹಿಸಲಾಗುತ್ತಿತ್ತು. ಸಂತೆ ದಿನವಾದ ಇಂದು ಮಾರುಕಟ್ಟೆಗೆ ಬೆಲ್ಲ, ತೆಂಗಿನ ಕಾಯಿ ತಂದ ವಾಹನದ ಚಾಲಕ ಕೊಣನೂರಿನ ಇದ್ರೀಸ್ ಎಂಬಾತ, ನಂತರ ನೇರವಾಗಿ ಜನತಾ ಕಾಲೋನಿಗೆ ತೆರಳಿ, ಮನೆಯೊಳಗೆ ಶೇಖರಿಸಿಟ್ಟಿದ್ದ ೧೬೫೦ ಕೆ.ಜಿ. ಅಕ್ಕಿಯನ್ನು ವಾಹನಕ್ಕೆ ತುಂಬಿಸುತ್ತಿದ್ದ.

ಇದನ್ನು ಗಮನಿಸಿದ ಸ್ಥಳೀಯರು ಆಹಾರ ಇಲಾಖೆಗೆ ಮಾಹಿತಿ ನೀಡಿದ್ದು, ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಸಂದರ್ಭ ಅಕ್ರಮ ದಾಸ್ತಾನು ಬೆಳಕಿಗೆ ಬಂದಿದೆ.

ಅಕ್ಕಿಯನ್ನು ವಶಪಡಿಸಿಕೊಂಡ ಅಧಿಕಾರಿಗಳು ಎಪಿಎಂಸಿ ಗೋದಾಮಿಗೆ ಸಾಗಿಸಿದ್ದು, ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮನೆ ಮಾಲೀಕರೂ ಸೇರಿದಂತೆ ವಾಹನ ಚಾಲಕ ಕೊಣನೂರಿನ ಇದ್ರೀಸ್ ಅವರಿಗಳಿಗೆ ನೋಟೀಸ್ ಜಾರಿಗೊಳಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಅಹಾರ ಇಲಾಖೆಯ ನಿರೀಕ್ಷಕರುಗಳಾದ ಯಶಸ್ವಿನಿ, ವಸಂತ್, ಸಿಬ್ಬಂದಿ ವಿನೋದ್‌ಕುಮಾರ್ ಭಾಗವಹಿಸಿದ್ದರು.