ಗೋಣಿಕೊಪ್ಪ ವರದಿ, ಜೂ. ೧೧: ಕರ್ನಾಟಕ ಲಲಿತಕಲಾ ಅಕಾಡೆಮಿ, ಕೊಡಗು ವನವಾಸಿ ಕಲ್ಯಾಣ ಹಾಗೂ ಬೆಳಕು ಫೌಂಡೇಷನ್ ವತಿಯಿಂದ ನಿಟ್ಟೂರು ವಾಲ್ಮಿಕಿ ಆಶ್ರಮ ಶಾಲೆಯಲ್ಲಿ ಆಯೋಜಿಸಿರುವ ಆರು ದಿನಗಳ ಭಿತ್ತಿಚಿತ್ರ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಜಡೇಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿ, ಶಿಕ್ಷಣದಿಂದ ಮಾತ್ರ ಗಿರಿಜನರು ಬದುಕಿನಲ್ಲಿ ಸಾಕಷ್ಟು ಸಾಧಿಸಲು ಅವಕಾಶವಿದೆ. ವ್ಯಾಸಾಂಗ ಸಮಯದಲ್ಲಿ ಗುರು-ಹಿರಿಯರ ಸಲಹೆ ಪಾಲಿಸಬೇಕು. ಶಿಕ್ಷಣಕ್ಕೆ ಒತ್ತು ನೀಡಬೇಕು. ನಿರ್ಲಕ್ಷö್ಯ ಮನೋಭಾವ ದಿಂದ ಶಿಕ್ಷಣ ಕಳೆದುಕೊಂಡವರು ನಂತರ ಸಮಾಜವನ್ನು ದೂಷಿಸುವುದು ಸರಿಯಲ್ಲ ಎಂದರು. ಶಿಕ್ಷಣ ಮೊದಲು, ನಂತರ ಸಾಧನೆಗೆ ಹಾದಿ ಸುಗಮವಾಗುತ್ತದೆ ಎಂದು ಸಲಹೆ ನೀಡಿದರು. ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಮಾತನಾಡಿ, ಗಿರಿಜನರ ಕಾರ್ಯಕ್ರಮಕ್ಕಾಗಿ ಮೀಸಲಿಟ್ಟಿದ್ದ ಅನುದಾನ ಅಕಾಡೆಮಿಯಿಂದ ಮತ್ತೆ ಸರ್ಕಾರಕ್ಕೆ ವಾಪಸ್ ಹೋಗುತ್ತಿತ್ತು. ಇಂತಹ ಕಾರ್ಯಕ್ರಮಗಳನ್ನು ನಗರಗಳಿಂದ ಗ್ರಾಮ ಮಟ್ಟಕ್ಕೆ ವಿಸ್ತರಿಸಿರುವುದು ಗ್ರಾಮೀಣ ಗಿರಿಜನ ಅಭಿವೃದ್ಧಿಗೆ ಸಹಕಾರಿ ಎಂದರು.

ತಾ. ೧೬ ರವರೆಗೆ ನಡೆಯಲಿರುವ ಶಿಬಿರದಲ್ಲಿ ೨೩ ಉದಯೋನ್ಮುಖ ಕಲಾವಿದರು ತರಬೇತಿ ನೀಡಲಿದ್ದಾರೆ.

ಕರ್ನಾಟಕ ಲಲಿತಕಲಾ ಅಕಾಡೆಮಿ ರಿಜಿಸ್ಟಾçರ್ ಆರ್. ಚಂದ್ರಶೇಖರ್, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಕ್ಕೇರ ಸೂರ್ಯ ಅಯ್ಯಪ್ಪ, ಉಪಾಧ್ಯಕ್ಷೆ ಪಡಿಞರಂಡ ಕವಿತ ಪ್ರಭು, ಸದಸ್ಯರಾದ ಕಾಟಿಮಾಡ ಶರೀನ್, ವೈ. ಅಮ್ಮಣಿ, ವೀರಾಜಪೇಟೆ ತಾಲೂಕು ಪರಿಶಿಷ್ಠ ವರ್ಗಗಳ ಕಲ್ಯಾಣ ಅಧಿಕಾರಿ ಗುರುಶಾಂತಪ್ಪ, ಬಾಳೆಲೆ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ವನವಾಸಿ ಕಲ್ಯಾಣ ಅಧ್ಯಕ್ಷ ವೈ. ಎಂ. ಪ್ರಕಾಶ್, ಪ್ರಾಂತ ವನವಾಸಿ ಕಲ್ಯಾಣ ಅಧ್ಯಕ್ಷ ಚೆಕ್ಕೇರ ಮನು ಕಾವೇರಪ್ಪ, ಬೆಳಕು ಫೌಂಡೇಷನ್ ಸಂಸ್ಥಾಪಕಿ ಪ್ರತಿಮ ಇದ್ದರು. ಪಡಿಞರಂಡ ಪ್ರಭುಕುಮಾರ್ ವಂದಿಸಿದರು.