ಕೂಡಿಗೆ, ಜೂ. ೧೧: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಅಳುವಾರ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಕಾಮಗಾರಿಗೆ ಈಗಾಗಲೇ ರೂ. ೫೦ ಲಕ್ಷ ಹಣವನ್ನು ಕಾವೇರಿ ನೀರಾವರಿ ನಿಗಮದ ಮೂಲಕ ಮಂಜೂರು ಮಾಡಿಸಲಾಗಿದ್ದು ಕಾಮಗಾರಿ ಯನ್ನು ಶೀಘ್ರವಾಗಿ ಆರಂಭ ಮಾಡುವಂತೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೂಚಿಸಿದರು.

ತೊರೆನೂರು ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದ ಸಂದರ್ಭ ತೊರೆನೂರು ದೊಡ್ಡಅಳುವಾರ ಗ್ರಾಮಕ್ಕೆ ತೆರಳುವ ಮುಖ್ಯರಸ್ತೆಯ ಸರ್ವೆ ಕಾರ್ಯ ಮುಗಿದಿರುವ ಹಿನ್ನೆಲೆಯಲ್ಲಿ ಮತ್ತು ಅಳುವಾರದಲ್ಲಿರುವ ವಿಶ್ವವಿದ್ಯಾಲಯದ ಕೇಂದ್ರಕ್ಕೆ ತೆರಳಲು ವ್ಯವಸ್ಥಿತವಾದ ಮಾರ್ಗ ಬೇಕಾಗಿ ರುವುದರಿಂದ ರಸ್ತೆ ಕಾಮಗಾರಿಗೆ ರೂ. ೫೦ ಲಕ್ಷ ಹಣವನ್ನು ಮಂಜೂರು ಮಾಡಿಸಲಾಗಿದ್ದು, ಈ ಸಾಲಿನಲ್ಲಿ ಕಾಮಗಾರಿಯನ್ನು ಪ್ರಾರಂಭಿಸು ವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭ ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್, ಉಪಾಧ್ಯಕ್ಷ ಬೇಬಿಯಣ್ಣ ಸೇರಿದಂತೆ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.