ಕೂಡಿಗೆ, ಜೂ. ೧೧: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಸದಸ್ಯರ ಆರೋಗ್ಯ ತಪಾಸಣೆ ಕೂಡಿಗೆಯಲ್ಲಿನ ಮಂಡಳಿಯ ಕೇಂದ್ರದ ಆವರಣದಲ್ಲಿ ನಡೆಯಿತು.
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಜನಪ್ರಿಯ ಹಾಸ್ಪಿಟಲ್ ಸಂಸ್ಥೆಯ ವತಿಯಿಂದ ವಿವಿಧ ರೀತಿಯ ಆರೋಗ್ಯ ತಪಾಸಣೆ ನಡೆಯಿತು.
ತಪಾಸಣೆಯಲ್ಲಿ ವೈದ್ಯರೊಂದಿಗೆ ಸಮಾಲೋಚನೆ, ಸಂಪೂರ್ಣ ದೈಹಿಕ ಪರೀಕ್ಷೆ, ಲಿವರ್ ಕಾರ್ಯ ಪರೀಕ್ಷೆ, ದೃಷ್ಟಿ ತಪಾಸಣೆ ಸೇರಿದಂತೆ ವಿವಿಧ ವೈದ್ಯಕೀಯ ಪರೀಕ್ಷೆಗಳು ನಡೆದವು. ಈ ಸಂದರ್ಭ ವೈದ್ಯರಾದ ಡಾ. ನೇಸಾಳ ಸಿಂಗ್ ಸೇರಿದಂತೆ ವಿವಿಧ ತಪಾಸಣಾ ವಿಭಾಗ ವರ್ಗದವರು ಹಾಜರಿದ್ದು ನೋಂದಾಯಿತ ೧೫೦ಕ್ಕೂ ಹೆಚ್ಚು ಕಾರ್ಮಿಕರು ತಪಾಸಣೆ ಮಾಡಿಸಿಕೊಂಡರು.