ಕೊಡ್ಲಿಪೇಟೆ, ಜೂ.೧೧: ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ನಾಡ ಕಚೇರಿಯನ್ನು ಲೋಕೋಪಯೋಗಿ ಇಲಾಖೆಯ ಮೂಲಕ ನವೀಕರಣ ಗೊಳಿಸಿದ್ದು, ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಉದ್ಘಾಟಿಸಿದರು.
ಜಿಲ್ಲೆಯ ಗಡಿ ಹೋಬಳಿಯಾಗಿರುವ ಕೊಡ್ಲಿಪೇಟೆ ನಾಡಕಚೇರಿಯು ಹಳೆಯ ಕಾಲದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಕಳೆದ ಸಾಲಿನ ಮಳೆಹಾನಿ ಪರಿಹಾರ ನಿಧಿಯಡಿ ನವೀಕರಣ ಕಾರ್ಯಕ್ಕೆ ಕ್ರಿಯಾಯೋಜನೆ ತಯಾರಿಸಲಾಗಿತ್ತು.
ಅದರಂತೆ ರೂ. ೧೧ ಲಕ್ಷ ಅನುದಾನ ಮೀಸಲಿಟ್ಟಿದ್ದು, ಈ ಹಣದಲ್ಲಿ ನಾಡ ಕಚೇರಿಯನ್ನು ನವೀಕರಣಗೊಳಿಸಲಾಗಿದೆ. ಕಚೇರಿಯ ನೆಲಕ್ಕೆ ಟೈಲ್ಸ್, ಸುಣ್ಣಬಣ್ಣ ಬಳಿಯುವುದು ಸೇರಿದಂತೆ ಸಣ್ಣಪುಟ್ಟ ರಿಪೇರಿ ಕಾರ್ಯ ನಡೆಸಲಾಗಿದ್ದು, ಶಾಸಕ ಅಪ್ಪಚ್ಚು ರಂಜನ್ ಕಚೇರಿಯನ್ನು ಉದ್ಘಾಟಿಸಿದರು.
ಈ ಸಂದರ್ಭ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು, ಉಪ ತಹಶೀಲ್ದಾರ್ ಪುರುಷೋತ್ತಮ್, ಶಿರಸ್ತೇದಾರ್ ಲೋಹಿತ್, ಕಂದಾಯ ನಿರೀಕ್ಷಕ ಮನುಕುಮಾರ್, ಗ್ರಾಮ ಲೆಕ್ಕಿಗರಾದ ಶ್ವೇತಾಶ್ರೀ, ಚೈತ್ರ, ಗ್ರಾಮ ಸಹಾಯಕರಾದ ರಾಜು, ಮಹೇಶ್, ಭೀಮೇಶ್, ಪ್ರಮುಖರಾದ ಕೆಂಚೇಶ್ವರ್, ಕುಶಾಲಪ್ಪ, ನಾಗರಾಜ್, ಕ್ಯಾತೆ ಶಿವು, ಹೆಬ್ಬುಲುಸೆ ಮನು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮಗಾರಿ ಬಗ್ಗೆ ಅಸಮಾಧಾನ: ಮಳೆಹಾನಿ ಪರಿಹಾರ ನಿಧಿಯಡಿ ರೂ. ೧೧ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ನಾಡಕಚೇರಿ ಕಾಮಗಾರಿ ಬಗ್ಗೆ ಶಾಸಕ ಅಪ್ಪಚ್ಚುರಂಜನ್ ಅವರು ಅಸಮಾಧಾನ ವ್ಯಕ್ತಪಡಿಸಿ, ಸಂಬAಧಿಸಿದ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡರು.
೧೧ ಲಕ್ಷ ವೆಚ್ಚದ ಕಾಮಗಾರಿಯಾದರೂ ನಿರೀಕ್ಷೆಯಂತೆ ಕೆಲಸ ನಡೆದಿಲ್ಲ. ಟೈಲ್ಸ್ ಹಾಕಿ ಕಾಟಾಚಾರಕ್ಕೆ ಬಣ್ಣ ಬಳಿಯಲಾಗಿದೆ. ಕಾಮಗಾರಿ ನಡೆಯುವ ಸಂದರ್ಭ ಅಧಿಕಾರಿಗಳು ಹಾಗೂ ಇಂಜಿನಿಯರ್ ಗಮನಹರಿಸಿಲ್ಲ. ಸ್ಥಳೀಯರೂ ಜಾಗ್ರತೆ ವಹಿಸಿಲ್ಲ. ತಕ್ಷಣ ಕಾಮಗಾರಿಯನ್ನು ಸರಿಪಡಿಸಬೇಕು. ಕಟ್ಟಡವನ್ನು ಸುಸಜ್ಜಿತಗೊಳಿಸಬೇಕು. ಕಾಮಗಾರಿ ಪೂರ್ಣಗೊಂಡ ನಂತರ ಮತ್ತೊಮ್ಮೆ ಪರಿಶೀಲಿಸುತ್ತೇನೆ. ಆ ನಂತರವಷ್ಟೇ ಗುತ್ತಿಗೆದಾರರಿಗೆ ಬಿಲ್ ನೀಡಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಅವರು, ಸಂಬAಧಿಸಿದ ಅಭಿಯಂತರ ವೆಂಕಟೇಶ್ ನಾಯಕ್ ಅವರಿಗೆ ನಿರ್ದೇಶನ ನೀಡಿದರು.