ಸೋಮವಾರಪೇಟೆ, ಜೂ. ೧೦: ಸಮೀಪದ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯು ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಸಾಧಿಸಿದ ಹಿನ್ನೆಲೆ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕ ವೃಂದದಿAದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು, ಪೋಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಪ್ರೋತ್ಸಾಹ ಮತ್ತು ವಿದ್ಯಾರ್ಥಿಗಳ ಶ್ರದ್ಧೆಯಿಂದಾಗಿ ಉತ್ತಮ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ೧೦ನೇ ತರಗತಿ ಮಹತ್ತರ ಘಟ್ಟವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆ ಹಾಗೂ ಉದ್ಯೋಗ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು. ಗುರಿ ಹಾಗೂ ಏಕಾಗ್ರತೆಯಿಂದ ವಿದ್ಯಾಭ್ಯಾಸದಲ್ಲಿ ತೊಡಗಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಸಲಹೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷೆ ಪದ್ಮಾವತಿ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ಪುಷ್ಪ, ನಾಮನಿರ್ದೇಶಿತ ಸದಸ್ಯೆ ಲಲಿತ, ಲೋಕಾನಂದ, ಲಲಿತ ಚಂದ್ರಪ್ಪ, ಗ್ರಾ.ಪಂ. ಸದಸ್ಯ ವಿನಯ್ ಸಂಭ್ರಮ್, ಹೆಚ್.ಆರ್. ಪ್ರಕಾಶ್, ಪೋಷಕ ಸಮಿತಿ ಅಧ್ಯಕ್ಷ ರಾಜಣ್ಣ, ಪ್ರಮುಖರಾದ ಎಂ.ಎ. ರುಬೀನಾ, ರವಿಕುಮಾರ್, ಶಾಲಾ ಮುಖ್ಯೋಪಾಧ್ಯಾಯ ಕೃಷ್ಣೇಗೌಡ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಎಲೆಸ್ತಾ ಡಿಸಿಲ್ವಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಎಸ್‌ಎಸ್‌ಎಲ್‌ಸಿಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಮೈಸೂರಿನ ರಾಜು ಅವರ ಸಹಕಾರದಿಂದ ಎಂ.ಎ. ರುಬೀನಾ ಅವರು ೫ ಸಾವಿರ ನಗದು ಪುರಸ್ಕಾರ ಹಸ್ತಾಂತರಿಸಿದರು. ಲಲಿತಾ ಅವರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿದರೆ, ರವಿಕುಮಾರ್ ಅವರು ಪಾರಿತೋಷಕ ವಿತರಿಸಿ ಸನ್ಮಾನಿಸಿದರು.