ವೀರಾಜಪೇಟೆ, ಜೂ. ೧೧: ಪೊಲೀಸರಿಂದ ಹಲ್ಲೆಗೊಳಗಾಗಿ ತೀವ್ರ ಸ್ವರೂಪದ ಗಾಯಗಳಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಎನ್ನಲಾಗಿರುವ ವೀರಾಜಪೇಟೆ ನಗರದ ಚಿಕ್ಕಪೇಟೆ ನಿವಾಸಿ ರಾಯ್ ಡಿಸೋಜ ಸಾವಿನ ಪ್ರಕರಣ ನಡೆದು ಒಂದು ವರ್ಷ ಕಳೆದರೂ ಇನ್ನೂ ತನಿಖೆ ಪೂರ್ಣಗೊಳ್ಳದೆ ಕುಟುಂಬಕ್ಕೆ ನ್ಯಾಯ ದೊರೆತಿಲ್ಲ.

ಕಳೆದ ವರ್ಷ ಜೂನ್ ೯ ರಂದು ವೀರಾಜಪೇಟೆಯಲ್ಲಿ ಮಾನಸಿಕ ಅಸ್ವಸ್ಥ, ಮೂರ್ಛೆ ರೋಗದಿಂದ ಬಳಲುತ್ತಿದ್ದ ರಾಯ್ ಡಿಸೋಜ ಮಧ್ಯರಾತ್ರಿ ಮನೆಯಿಂದ ಕತ್ತಿ ಹಿಡಿದು ಓಡಿದ್ದಾರೆ. ಅಡ್ಡ ಸಿಕ್ಕ ಪೊಲೀಸ್ ಪೇದೆ ನಡುವೆ ಗಲಾಟೆ ಉಂಟಾಗಿ ಪೇದೆಯ ಮೇಲೆ ಕತ್ತಿ ಬೀಸಿದ್ದು, ಇದರಿಂದ ಪೇದೆಗೆ ಗಾಯವಾಗಿತ್ತು. ನಂತರ ರಾಯ್ ಡಿಸೋಜ ಪೊಲೀಸ್ ಠಾಣೆ ಎದುರು ಕಿರುಚಾಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು. ಈ ನಡುವೆ ಪೊಲೀಸರು ರಾಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅದೇ ರಾತ್ರಿ ತಾಯಿಯನ್ನು ಠಾಣೆಗೆ ಕರೆದೊಯ್ದ ಸಂದರ್ಭ ರಾಯ್ ತೀವ್ರ ಹಲ್ಲೆಗೊಳಗಾಗಿ ಕುಸಿದು ಬಿದ್ದಿದ್ದು ಕಂಡು ಬಂದಿತ್ತು. ನಂತರ ರಾಯ್ ಅನ್ನು ಮನೆಗೆ ಕರೆ ತಂದು ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ಕರೆತರಲಾಗಿತ್ತು.

ತೀವ್ರ ಚರ್ಚೆಗೆ ಕಾರಣವಾಗಿದ್ದ ಪ್ರಕರಣ

ಚಿಕಿತ್ಸೆ ಫಲಿಸದೆ ಜೂನ್ ೧೨ ರಂದು ರಾಯ್ ಮೃತಪಟ್ಟರು. ಈ ಪ್ರಕರಣ ರಾಜ್ಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿ ವೀರಾಜಪೇಟೆಗೆ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಮಧುಕರ್ ಪವಾರ್ ಭೇಟಿ ನೀಡಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಿದ್ದಲ್ಲದೆ ಇಬ್ಬರು ಮುಖ್ಯಪೇದೆ ಸೇರಿ ೮ ಮಂದಿ ಸಿಬ್ಬಂದಿಗಳನ್ನು ಅಮಾನತ್ತು ಮಾಡಿದ್ದರು.

(ಮೊದಲ ಪುಟದಿಂದ)

ಸಲ್ಲಿಕೆಯಾಗದ ವರದಿ

ತಾಲೂಕು ಮ್ಯಾಜಿಸ್ಟೆçÃಟ್ ಸಮ್ಮುಖದಲ್ಲಿ ರಾಯ್ ಡಿಸೋಜ ಮರಣೋತ್ತರ ಪರೀಕ್ಷೆ ನಡೆಸಿದ ಸಂದರ್ಭ ಮೃಗೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದು, ಬೆಳಕಿಗೆ ಬಂದಿತ್ತು. ಈ ಪ್ರಕರಣವನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರವಾಗಿ ಖಂಡಿಸಿತ್ತು. ಕ್ರೆöÊಸ್ತ ಸಂಘಟನೆ ಪ್ರಮುಖರು ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದರು. ಅಂದು ಪ್ರತಿಭಟನೆಗಳು ನಡೆದಿದ್ದವು.

ಐಜಿಪಿ ಸೂಚನೆ ಅನ್ವಯ ವೀರಾಜಪೇಟೆಗೆ ಬಂದ ಸಿಐಡಿ ತಂಡ ತಾಯಿ ಮೆಟಿಲ್ಡಾ ಲೋಬೋ ಹಾಗೂ ಸಹೋದರ ರಾಬಿನ್ ಡಿಸೋಜ ಅವರ ಹೇಳಿಕೆ ಪಡೆದಿತ್ತು. ಜೊತೆಗೆ ಮರಣೋತ್ತರ ಪರೀಕ್ಷೆ ವರದಿ, ಸಿಸಿಟಿವಿ ದೃಶ್ಯಾವಳಿಯನ್ನು ಪಡೆದಿದ್ದರು. ಇಷ್ಟೆಲ್ಲ ವಿದ್ಯಮಾನಗಳಿಗೆ ಕಾರಣವಾಗಿದ್ದ ಈ ಪ್ರಕರಣ ನಡೆದು ವರ್ಷ ಕಳೆದರೂ ಅಂತಿಮ ವರದಿ ಸಲ್ಲಿಕೆಯಾಗದಿರುವುದು ಪ್ರಶ್ನೆಗೆ ಕಾರಣವಾಗಿದೆ.

ಸಿಐಡಿ ಪೊಲೀಸರು ತಮ್ಮ ತನಿಖೆ ಚುರುಕುಗೊಳಿಸಿದ್ದರು. ಆಗಸ್ಟ್ ತಿಂಗಳಿನಲ್ಲಿ ರಾಯ್ ಡಿಸೋಜ ಕೊಲೆ ಆರೋಪ ಎದುರಿಸುತ್ತಿದ್ದ ಆರೋಪಿಗಳಾದ ಪೊಲೀಸ್ ಸಿಬ್ಬಂದಿಗಳು ವೀರಾಜಪೇಟೆಯ ಎರಡನೇ ಅಧಿಕ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಅಚ್ಚರಿ ಎಂಬAತೆ ಕೊಲೆ ಆರೋಪದಲ್ಲಿ ಆರೋಪಿತರಾಗಿದ್ದ ಅಮಾನತುಗೊಂಡಿದ್ದ ಎಂಟು ಪೊಲೀಸ್ ಸಿಬ್ಬಂದಿಗಳು ಕರ್ತವ್ಯಕ್ಕೆ ಮರಳಿದ್ದು, ಇವರ ವಿರುದ್ಧ ಯಾವುದೇ ರೀತಿಯ ಕ್ರಮವಾಗದಿರುವುದು ಸಾರ್ವಜನಿಕ ವಲಯದಲ್ಲಿ ಇಂದಿಗೂ ಭಾರೀ ಚರ್ಚೆಗೆ ಗ್ರಾಸವಾದ ವಿಚಾರವಾಗಿದೆ.

ಘಟನೆ ನಡೆದ ಸಂದರ್ಭ ಕಾಂಗ್ರೆಸ್ ಪಕ್ಷದ ಮಾಜಿ ಎಂ.ಎಲ್.ಸಿ. ಐವಾನ್ ಡಿಸೋಜಾ ಕೂಡಾ ಖುದ್ದು ರಾಯ್ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರಲ್ಲದೆ ಸುದ್ದಿಗೋಷ್ಠಿ ನಡೆಸಿ ಪೊಲೀಸರ ಹಲ್ಲೆಯ ಬಗ್ಗೆ ತೀವ್ರ ವಾಗ್ದಾಳಿಯನ್ನು ನಡೆಸಿದ್ದರು. ಇದರೊಂದಿಗೆ ಹಲವು ರಾಜಕಾರಣಿಗಳು ಘಟನೆಯನ್ನು ಖಂಡಿಸಿದ್ದರು. ಅಲ್ಲದೇ ಸರ್ಕಾರ ಈ ಕೂಡಲೇ ರಾಯ್ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಮೃತರ ಕುಟುಂಬಕ್ಕೆ ಪರಿಹಾರ ಹಾಗೂ ನ್ಯಾಯ ನೀಡಬೇಕು ಎಂದು ಕೇಳಿಕೊಂಡಿದ್ದರೂ, ಈ ಪ್ರಕರಣವನ್ನು ರಾಜಿ ತೀರ್ಮಾನ ಮಾಡಿಸಿ ಎಂದು ಆರೋಪಿ ಪೊಲೀಸರುಗಳು ಹಲವು ತೆರೆಮರೆ ಯತ್ನಗಳು ನಡೆಸುತ್ತಿದ್ದಾರೆ ಎನ್ನಲಾಗಿದೆ.

ರಾಜ್ಯದಾದ್ಯಂತ ಚರ್ಚೆಯಾಗಿದ್ದ ಈ ಪ್ರಕರಣ ಇಂದು ತಣ್ಣನೆಯಾಗಿದೆ. ಸಿಐಡಿ ವರದಿ ಯಾವ ಹಂತದಲ್ಲಿದೆ ಎಂದು ತಿಳಿದಿಲ್ಲ. ಅಂದು ಘಟನೆಯನ್ನು ಖಂಡಿಸಿದ್ದವರು ಇಂದು ಸುಮ್ಮನಾಗಿದ್ದಾರೆ. ತಾರ್ಕಿಕ ಅಂತ್ಯದ ತನಕ ಹೋರಾಡುತ್ತೇವೆ ಎಂದಿದ್ದ ಸಂಘಟನೆಗಳು ಕಣ್ಮರೆಯಾಗಿವೆ. ಆದರೆ, ಮಗನನ್ನು ಕಳೆದುಕೊಂಡ ತಾಯಿ ನೋವು ಕ್ಷೀಣಿಸಿಲ್ಲ. ಮಗನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮವಾಗಬೇಕೆಂದು ಕೂಗು ಅವರಿಂದ ಇಂದಿಗೂ ಕೇಳಿ ಬರುತ್ತಿದೆ. ಇನ್ನಾದರೂ ಈ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ತನಿಖೆ ಪ್ರಕ್ರಿಯೆ ಪೂರ್ಣಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳ ಬೇಕಾಗಿದೆ. -ಉಷಾ ಪ್ರೀತಂ