ಮಡಿಕೇರಿ, ಜೂ. ೧೦ : ಚೆಟ್ಟಳ್ಳಿ ಸಮೀಪದ ಈರಳೆ ವಳಮುಡಿ ಗ್ರಾಮದ ಊರ್ ಮಂದ್ ಜಾಗವನ್ನು ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದು, ಮಡಿಕೇರಿ ಕೊಡವ ಸಮಾಜ ನೂತನ ಆಡಳಿತ ಮಂಡಳಿ ಮಧ್ಯಪ್ರವೇಶಿಸಿ ಒತ್ತುವರಿ ತೆರವುಗೊಳಿಸಿ ಕೊಡಬೇಕೆಂದು ಸಮಾಜ ಸೇವಕ ಬಲ್ಲಾರಂಡ ಮಣಿ ಉತ್ತಪ್ಪ ಆಗ್ರಹಿಸಿದರು.ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಕೃತಿ ಉಳಿವಿಗೆ ಊರಿನ ಮಂದ್ ರಕ್ಷಣೆ ಅತ್ಯವಶ್ಯಕವಾಗಿದೆ. ಆದರೆ, ಹಲವು ವರ್ಷಗಳಿಂದ ಊರೋರ್ಮೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುಕೊಂಡು ಬಂದಿರುವ ಮಂದ್ ಜಾಗವನ್ನು ಗ್ರಾಮದ ವ್ಯಕ್ತಿ ತಮ್ಮ ಪತ್ನಿ ಹೆಸರಿನಲ್ಲಿ ಒತ್ತುವರಿ ಮಾಡಿಕೊಂಡಿದ್ದಾರೆ. ಆದ್ದರಿಂದ ಕೊಡವ ಸಮಾಜದ ಆಡಳಿತ ಮಂಡಳಿ ಈ ಬಗ್ಗೆ ಪರಿಶೀಲಿಸಿ ಮಂದ್ ಜಾಗವನ್ನು ಬಿಡಿಸಿಕೊಡಬೇಕೆಂದು ಒತ್ತಾಯಿಸಿದರು. ೨೫ ವರ್ಷಗಳಿಂದ ಈ ಬಗ್ಗೆ ಕಾನೂನು ಹೋರಾಟ ಮಾಡುತ್ತಿದ್ದು, ಕೊನೆತನಕ ಹೋರಾಡುತ್ತೇವೆ ಎಂದು ಹೇಳಿದರು.