(ವಿಶೇಷ ವರದಿ:ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಜೂ. ೧೦ : ಕೊಡಗಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಪ್ರಕೃತಿ ವಿಕೋಪದಿಂದ ಅನುಭವಿಸಿದ ಕಷ್ಟನಷ್ಟಗಳ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಚೆಸ್ಕಾಂ ಇಲಾಖೆಯು ಮಳೆಗಾಲಕ್ಕೂ ಮುನ್ನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಜಿಲ್ಲೆಯ ಉದ್ದಗಲಕ್ಕೂ ವಿದ್ಯುತ್ ತಂತಿ ಹಾದುಹೋಗುವ ಮಾರ್ಗದಲ್ಲಿ ವಿದ್ಯುತ್ ತಂತಿಗೆ ಅಡಚಣೆಯಾಗುವ ಮರದ ಕೊಂಬೆಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಮಳೆಗಾಲದಲ್ಲಿ ಮರಗಳು ವಿದ್ಯುತ್ ತಂತಿಯ ಮೇಲೆ ಬೀಳದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಖಾತರಿಪಡಿಸಿದ್ದಾರೆ. ಈ ನಿಟ್ಟಿನಲ್ಲಿ ವಾರದ ಕೆಲವು ದಿನಗಳಲ್ಲಿ ವಿದ್ಯುತ್ ಅನ್ನು ಸಂಪೂರ್ಣ ನಿಲುಗಡೆಗೊಳಿಸಿ ಚೆಸ್ಕಾಂ ಸಿಬ್ಬಂದಿಗಳು ಮುಂಜಾನೆ ಯಿಂದಲೇ ತಮ್ಮ ಕೆಲಸಗಳನ್ನು ಆರಂಭಿಸಿದ್ದಾರೆ. ವಿಪರೀತವಾಗಿ ಬೀಸುವ ಗಾಳಿಯಿಂದ ಮರದ ಕೊಂಬೆಗಳು ಹಾಗೂ ಕೆಲವು ಮರಗಳು ವಿದ್ಯುತ್ ತಂತಿಯ ಮೇಲೆ ಬೀಳುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿರುವುದನ್ನು ಮನಗಂಡು ಇಂತಹ ಸ್ಥಳದಲ್ಲಿ ಮರಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.
ಮಳೆಗಾಲದಲ್ಲಿ ವಿದ್ಯುತ್ ಅಡಚಣೆಯನ್ನು ಸಮರ್ಪಕವಾಗಿ ಎದುರಿಸಲು ಈಗಾಗಲೇ ಚೆಸ್ಕಾಂ ಇಲಾಖೆಯು ಸಜ್ಜಾಗಿದೆ. ಜಿಲ್ಲೆಯ ಚೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ರವರು ಈಗಾಗಲೇ ಜಿಲ್ಲೆಯ ೫ ತಾಲೂಕುಗಳಿಗೆ ಖುದ್ದಾಗಿ ಭೇಟಿ ನೀಡಿ ಮುಂಬರುವ ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಸಿಬ್ಬಂದಿಗಳೊAದಿಗೆ ಹಾಗೂ ಅಧಿಕಾರಿಗಳೊಂದಿಗೆ
ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಿರುವುದಾಗಿ ಖಚಿತಪಡಿಸಿ ದ್ದಾರೆ.
ಮಳೆಗಾಲದಲ್ಲಿ ಸಂಭವಿಸ ಬಹುದಾದ ಅನಾಹುತಗಳನ್ನು ತಕ್ಷಣವೇ ಎದುರಿಸಲು ಈಗಾಗಲೇ ಜಿಲ್ಲೆಗೆ ೧೪ ಪಿಕಪ್ ವಾಹನಗಳನ್ನು ಸಜ್ಜಾಗಿ ಇಟ್ಟುಕೊಳ್ಳಲಾಗಿದೆ. ಇದರೊಂದಿಗೆ ತುರ್ತು ಕೆಲಸಕ್ಕಾಗಿ ೭೫ ಗ್ಯಾಂಗ್ ಮೆನ್ಗಳನ್ನು ಇಲಾಖೆಯು ನೇಮಿಸಿಕೊಂಡಿದೆ. ಮಳೆ, ಗಾಳಿಯಿಂದ ಹೆಚ್ಚಿನ ವಿದ್ಯುತ್ ಕಂಬಗಳು ಮುರಿದು ಬೀಳುವ ಸಾಧ್ಯತೆಯಿರುವುದರಿಂದ ಜಿಲ್ಲೆಯಲ್ಲಿ ಸಾವಿರ ವಿದ್ಯುತ್ ಕಂಬಗಳನ್ನು ಶೇಖರಣೆ ಮಾಡಲಾಗಿದೆ.
(ಮೊದಲ ಪುಟದಿಂದ) ೭೦ ಟ್ರಾನ್ಸ್ಫಾರ್ಮರ್ಗಳನ್ನು ಹಾಗೂ ೩೫ ಕಿ.ಮೀ. ವಿದ್ಯುತ್ ತಂತಿಯನ್ನು ದಾಸ್ತಾನು ಇಡಲಾಗಿದೆ. ಮಳೆಗಾಲದಲ್ಲಿ ಬೇಕಾದ ಇತರ ವಿದ್ಯುತ್ ಸಾಮಗ್ರಿಗಳನ್ನು ಕೂಡ ದಾಸ್ತಾನು ಇಡಲಾಗಿದೆ ಎಂದು ಇಇ ಅಶೋಕ್ ಮಾಹಿತಿ ಒದಗಿಸಿದರು.
ಜಿಲ್ಲೆಯಲ್ಲಿರುವ ಚೆಸ್ಕಾಂ ಕಚೇರಿಗಳಲ್ಲಿ ಲೈನ್ಮೆನ್ಗಳ ಕೊರತೆ ಎದುರಿಸಲು ಈಗಾಗಲೇ ನೂರು ಮಂದಿಯನ್ನು ಇಲಾಖೆ ವತಿಯಿಂದ ನೇಮಕಗೊಳಿಸಲಾಗಿದೆ. ಗುಡ್ಡಗಾಡು ಪ್ರದೇಶವಾದ ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ಹಾಗೂ ಶ್ರೀಮಂಗಲ ವ್ಯಾಪ್ತಿಗೆ ಹೆಚ್ಚಿನ ಲೈನ್ಮೆನ್ಗಳನ್ನು ನಿಯೋಜಿಸಲು ಕ್ರಮಕೈಗೊಂಡಿದ್ದು ಕೆಲವೇ ದಿನಗಳಲ್ಲಿ ಈ ಮಂದಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ೧೦೦ ಮಂದಿಯ ನೇಮಕಾತಿಗೆ ಬೇಕಾದ ವ್ಯವಸ್ಥೆಗಳನ್ನು ಇಲಾಖೆಯ ಮಟ್ಟದಲ್ಲಿ ಪೂರ್ಣಗೊಳಿಸಲಾಗಿದೆ. ಆದೇಶ ಪ್ರತಿ ನೀಡಲು ಮಾತ್ರ ಬಾಕಿ ಉಳಿದಿದೆ. ಕೆಲವು ತಾಂತ್ರಿಕ ಕಾರಣ ಹೊರತುಪಡಿಸಿ ಮಿಕ್ಕೆಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಅಶೋಕ್ ವಿವರಿಸಿದ್ದಾರೆ.
ಜಿಲ್ಲೆಯ ವಿವಿಧ ಚೆಸ್ಕಾಂ ಕಚೇರಿಗಳಲ್ಲಿ ಅಗತ್ಯ ಸಾಮಗ್ರಿಗಳ ಸಲಕರಣೆಗಳ ದಾಸ್ತಾನನ್ನು ಇಡಲಾಗಿದೆ ಹಾಗೂ ಅವುಗಳನ್ನು ತುರ್ತಾಗಿ ಬಳಸಲು ಚೆಸ್ಕಾಂ ಸಹಾಯಕ ಇಂಜಿನಿಯರ್ಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ. ಸಿಬ್ಬಂದಿಗಳಿಗೆ ವಿಶೇಷ ರೀತಿಯ ತರಬೇತಿ ನೀಡಿ ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಹೇಳಲಾಗಿದೆ. ವಿದ್ಯುತ್ ನಿಲುಗಡೆಗೊಂಡ ವೇಳೆ ಆದಷ್ಟು ಬೇಗನೇ ಗ್ರಾಹಕರಿಗೆ ವಿದ್ಯುತ್ ನೀಡಲು ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿಯಿತ್ತಿದ್ದಾರೆ.
ದ. ಕೊಡಗಿನ ಶ್ರೀಮಂಗಲ, ಬಿರುನಾಣಿ, ಪೂಕಳ, ಕುಟ್ಟ, ಕುರ್ಚಿ ಇತರ ಗ್ರಾಮಾಂತರ ಭಾಗಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆಯನ್ನು ಬಗೆ ಹರಿಸಲು ಈಗಾಗಲೇ ಶ್ರೀಮಂಗಲದಿAದ ಬಿರುನಾಣಿಗೆ ಇರುವ ಎಕ್ಸ್ಪ್ರೆಸ್ ಲೈನ್ ಅನ್ನು ಸಂಪೂರ್ಣ ದುರಸ್ತಿಗೊಳಿಸಿ ಶ್ರೀಮಂಗಲದಿAದ ಯಾವುದೇ ಅಡೆತಡೆ ಇಲ್ಲದೆ ನೇರವಾಗಿ ಬಿರುನಾಣಿಗೆ ವಿದ್ಯುತ್ ಸರಬರಾಜು ಮಾಡುವ ಸಲುವಾಗಿ ಇಲಾಖಾ ಸಿಬ್ಬಂದಿಗಳು ಅಧಿಕಾರಿಗಳ ಸೂಚನೆಯಂತೆ ಕೆಲಸ ಕೈಗೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಲಭಿಸಲಿದೆ. ಇದರಿಂದ ಹಲವು ದಶಕಗಳಿಂದ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದ ಬಿರುನಾಣಿ ಭಾಗದ ಜನತೆ ವಿದ್ಯುತ್ ಸಮಸ್ಯೆಯಿಂದ ಹೊರಬರಲಿದ್ದಾರೆ.
ಹುದಿಕೇರಿ ಹಾಗೂ ಬಾಳೆಲೆಯಲ್ಲಿ ಈಗಾಗಲೇ ನೂತನ ಸ್ಟೇಷನ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಇನ್ನುಳಿದಂತೆ ಕಳತ್ಮಾಡು ಗೊಟ್ಟಡ ಭಾಗದಲ್ಲಿ ನೂತನ ಸಬ್ಸ್ಟೇಷನ್ ನಿರ್ಮಾಣ ಮಾಡಲು ಇಲಾಖೆಗೆ ಪತ್ರ ವ್ಯವಹಾರ ನಡೆಸಲಾಗಿದೆ. ಈ ಮೂರು ಸಬ್ಸ್ಟೇಷನ್ಗಳು ಕಾರ್ಯಾರಂಭವಾಗಲಿದೆ. ಕೊಡಗಿನ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಲಭಿಸಲಿದೆ. ವಾರ್ಷಿಕವಾಗಿ ಕೊಡಗು ಜಿಲ್ಲೆಯಲ್ಲಿ ಚೆಸ್ಕಾಂಗೆ ಹೆಚ್ಚಿನ ಆದಾಯ ಇಲ್ಲಿನ ಗ್ರಾಹಕರಿಂದ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಜಿಲ್ಲೆಯ ಪ್ರಮುಖ ರೈತ ಸಂಘಟನೆ ರೈತರಿಗೆ ಗುಣಮಟ್ಟದ ವಿದ್ಯುತ್ ನೀಡುವಂತೆ ಇಲಾಖಾಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಆಗಿಂದಾಗ್ಗೆ ಒತ್ತಡ ತರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಚೆಸ್ಕಾಂ ಹಿರಿಯ ಅಧಿಕಾರಿಗಳು ಇದೀಗ ತಮ್ಮ ಕೆಲಸಕ್ಕೆ ಚುರುಕು ನೀಡಿದ್ದಾರೆ.