ಮಡಿಕೇರಿ, ಜೂ. ೧೧: ಕಾಂಗ್ರೆಸ್ ಪಕ್ಷ ಭಾರತ ದೇಶದ ಆತ್ಮವಾಗಿದ್ದು ಆತ್ಮ ಎಂದಿಗೂ ಸ್ಥಿರವಾಗಿಯೇ ಇರುತ್ತದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಭಿಮತ ವ್ಯಕ್ತಪಡಿಸಿದರು.
ಅಂಬೇಡ್ಕರ್ ಭವನದಲ್ಲಿ ನಡೆದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾಂಗ್ರೆಸ್ ಎಲ್ಲಿಯವರೆಗೆ ದೇಶದಲ್ಲಿ ಪ್ರಜಾಪ್ರಭುತ್ವ ಶಾಶ್ವತವಾಗಿರುತ್ತದೆಯೋ ಅಲ್ಲಿಯವರೆಗೆ ಶಾಶ್ವತವಾಗಿರುತ್ತದೆ ಎಂದು ಹೇಳಿದರು.
ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪೊನ್ನಣ್ಣ ಮಾತನಾಡಿ, ಪಕ್ಷದ ವೈಫಲ್ಯಕ್ಕೆ ನಾಯಕರು, ಕಾರ್ಯಕರ್ತರು ಎಲ್ಲರೂ ಸಮಾನ ಹೊಣೆಗಾರರಾಗಿರುತ್ತಾರೆ. ಆದ್ದರಿಂದ ಪಕ್ಷದ ನಾಯಕರು, ಕಾರ್ಯಕರ್ತರು ಒಂದಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಕರೆ ನೀಡಿದರು.
ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ ದೇಶದಲ್ಲಿ ಅಭದ್ರತೆ ಗೋಚರಿಸುತ್ತಿದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ದೇಶವನ್ನು ರಕ್ಷಿಸಲು ಸಾಧ್ಯ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ ಮಾತನಾಡಿ, ಪಕ್ಷದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕೆಲಸ ಮಾಡಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ನುಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ ಮಾತನಾಡಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಸ್ಥಳೀಯವಾರು, ವರ್ಗವಾರು ಪ್ರಾತಿನಿಧ್ಯ ನೀಡಿರುವುದು ಉತ್ತಮ ಬೆಳವಣಿಗೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ ನಾಯಕರು ಪೂರ್ಣ ಸಹಕಾರ ನೀಡಿದಲ್ಲಿ ಮಡಿಕೇರಿ ಬ್ಲಾಕ್ನಲ್ಲಿ ಪಕ್ಷವನ್ನು ಪರಿಪೂರ್ಣವಾಗಿ ಸಂಘಟಿಸುವುದಾಗಿ ಭರವಸೆ ನೀಡಿದರು.
ಜಿ.ಪಂ. ಸದಸ್ಯ ವಿ.ಪಿ. ಶಶಿಧರ್ ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ, ಇತಿಹಾಸದ ಬಗ್ಗೆ ಮಾತನಾಡಿದರು.
ಡಾ. ಮಂಥರ್ ಗೌಡ, ಟಿ.ಪಿ. ರಮೇಶ್, ಡಾ. ಪಿ.ಸಿ. ಹಸೈನಾರ್, ಹೆಚ್.ಎಂ. ನಂದಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕೆಪಿಸಿಸಿ ಮುಖಂಡರು, ಡಿಸಿಸಿ ಪದಾಧಿಕಾರಿಗಳು, ಬ್ಲಾಕ್ ಸಮಿತಿ ಸದಸ್ಯರು ವಲಯ ಕಾಂಗ್ರೆಸ್ ಪ್ರಮುಖರು ಭಾಗವಹಿಸಿದ್ದರು. ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ ಕಾರ್ಯಕ್ರಮ ನಿರೂಪಿಸಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಭುರೈ ಸ್ವಾಗತಿಸಿ, ದೋಲ್ಪಾಡಿ ಯಶ್ ವಂದಿಸಿದರು.