ಬಾಲಕ-ಬಾಲಕಿಯರನ್ನು ಅವರ ಬಾಲ್ಯದ ಹಕ್ಕುಗಳಿಂದ ಹೊರಗಿಡುವ ಪ್ರಯತ್ನವೇ ಬಾಲ ದೌರ್ಜನ್ಯ. ಬಾಲಕ-ಬಾಲಕಿಯರನ್ನು ಬಾಲ ಕಾರ್ಮಿಕರಾಗಿ ದುಡಿಸಿಕೊಳ್ಳುವುದು ದೊಡ್ಡ ತಪ್ಪು. ಕಾನೂನಿನ ಪರಿವ್ಯಾಪ್ತಿಯಲ್ಲೂ ಅದು ಅಪರಾಧ. ಬಾಲಕ-ಬಾಲಕಿಯರನ್ನು ಅವರ ಬಾಲ್ಯದ ಕನಸುಗಳಿಂದ ದೂರವಿರಿಸಲು ನಮಗೆ ಯಾವುದೇ ಹಕ್ಕಿಲ್ಲ. ಅವರಿಗೆ ಸಿಗುವಂತಹ ಪ್ರಾಥಮಿಕ ಶಿಕ್ಷಣದಿಂದಲೂ ಅವರನ್ನು ವಂಚಿಸಲಾಗುತ್ತಿದೆ. ಬಾಲ ಕಾರ್ಮಿಕರು ಬಾಲ ದೌರ್ಜನ್ಯದ ಇನ್ನೊಂದು ಮುಖ. ಅದೊಂದು ರೀತಿಯ ಶೋಷಣೆ ಕೂಡ ಹೌದು. ಬಾಲ ಕಾರ್ಮಿಕರೆಂದರೆ ವಿವಿಧ ಉದ್ದಿಮೆಗಳಲ್ಲಿ ದುಡಿಯುತ್ತಿರುವ ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕ-ಬಾಲಕಿಯರು. ಸಾಕ್ಷರತೆ ಹೆಚ್ಚಿರುವಲ್ಲಿ ಬಾಲ ಕಾರ್ಮಿಕ ಪದ್ಧತಿ ಕಡಿಮೆಯಿರುವುದು. ಭಾರತದಲ್ಲಿ ಶೇ. ೯೧ ರಷ್ಟು ಬಾಲ ಕಾರ್ಮಿಕರು ಗ್ರಾಮೀಣ ಪ್ರದೇಶದಲ್ಲಿ ಹಾಗೂ ಶೇ. ೯ ರಷ್ಟು ಬಾಲ ಕಾರ್ಮಿಕರು ನಗರ ಪ್ರದೇಶದಲ್ಲಿದ್ದಾರೆ. ಈ ಪದ್ಧತಿಯ ತಡೆಗೆ ಸರಕಾರ ನಿರಂತರ ಪ್ರಯತ್ನಿಸುತ್ತಲೇ ಇದೆ. ಕಾನೂನಿನ ರಕ್ಷಣೆಯನ್ನು ನೀಡಿದ್ದರೂ, ಸಮಾಜದಲ್ಲಿ ಇನ್ನೂ ಕೂಡ ಮುಂದುವರೆಯುತ್ತಿರುವುದು ಬೇಸರದ ಸಂಗತಿ.

ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ೧೯೮೬ ರಿಂದ ಜಾರಿಯಲ್ಲಿದೆ. ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ೧೯೬೧, ಸೆಕ್ಷನ್ ೨೪ ರ ಪ್ರಕಾರ ಬಾಲ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಸರಕಾರ ಇಲಾಖೆಯನ್ನೇ ಜಾಗೃತಗೊಳಿಸಿದೆ. ಬಾಲ ಕಾರ್ಮಿಕರನ್ನು ಬಳಸುವ ಅಂಗಡಿ, ಉದ್ದಿಮೆ ಮಾಲೀಕರಿಗೆ ಕಾನೂನಿನ ಮುಖಾಂತರ ಶಿಕ್ಷೆಯನ್ನು ವಿಧಿಸಲಾಗುವುದು. ಸಾಮಾನ್ಯವಾಗಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ಅನಕ್ಷರತೆ, ಅರಿವಿನ ಕೊರತೆಯಿಂದ ಬಾಲ ಕಾರ್ಮಿಕ ಪದ್ಧತಿ ಹೆಚ್ಚಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಮಕ್ಕಳನ್ನು ಬೇರೆಯವರ ಹೊಲಕ್ಕೆ ಕೂಲಿಗಾಗಿ ಕಳುಹಿಸುವುದು ಹಾಗೂ ತಮ್ಮ ಹೊಲ ಮತ್ತು ಮನೆ ಕೆಲಸಕ್ಕೆ ತೊಡಗಿಸಿಕೊಳ್ಳುವುದು ನಡೆಯುತ್ತದೆ. ನಗರ ಪ್ರದೇಶಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ಹೆಚ್ಚಾಗಿ ಕೊಳಚೆ ಪ್ರದೇಶಗಳಲ್ಲಿ ಕಂಡುಬರುವುದು. ಬಾಲಕಾರ್ಮಿಕ ಪದ್ಧತಿ ಅಡೆತಡೆಯಿಲ್ಲದೇ ಬೆಳೆಯಲು ಮುಖ್ಯ ಕಾರಣ ಅನಕ್ಷರತೆ, ಬಡತನ, ಮಾಲೀಕರ ಸ್ವಾರ್ಥ, ಬಾಲ ಕಾರ್ಮಿಕ ನಿಷೇಧ ಕಾನೂನಿನ ಉಲ್ಲಂಘನೆ ಮುಂತಾದವು. ರಾಜ್ಯದಲ್ಲಿ ಸುಮಾರು ೨೦೦೦ ಕ್ಕಿಂತಲೂ ಅಧಿಕ ಕೊಳಚೆ ಪ್ರದೇಶಗಳಿವೆ. ಇಲ್ಲಿ ಹೆಚ್ಚಿನ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಬಡತನವು ಇದಕ್ಕೆ ಮುಖ್ಯ ಕಾರಣ. ಬಡತನದಲ್ಲಿರುವ ಕುಟುಂಬಗಳು ಒತ್ತಾಯಪೂರ್ವಕವಾಗಿ ಬಾಲ ಕಾರ್ಮಿಕ ಪದ್ಧತಿಗೆ ಒಳಪಡುವುದು.

ಬಾಲ ಕಾರ್ಮಿಕರು ಹೆಚ್ಚಾಗಿ ತೊಡಗಿಸಿಕೊಂಡಿರುವ ಉದ್ದಿಮೆಗಳೆಂದರೆ ವರ್ಕ್ ಶಾಪ್‌ಗಳು, ಗ್ಯಾರೇಜ್‌ಗಳು, ಹೊಟೇಲ್ ಉದ್ದಿಮೆ ಇನ್ನೂ ಮುಂತಾದ ಸಣ್ಣಪುಟ್ಟ ಉದ್ದಿಮೆಗಳಲ್ಲಿ ದುಡಿಯುತ್ತಿದ್ದಾರೆ. ಅಷ್ಟೇ ಅಲ್ಲದೇ ಅಪಾಯಕಾರಿಯಾದ ಉದ್ದಿಮೆಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ನಗರ ಪ್ರದೇಶಗಳಿಗೆ ಪೋಷಕರ ವಲಸೆ, ಅಸಹಾಯಕತೆ, ಪೋಷಕರ ಸಂರಕ್ಷಣೆ ಇಲ್ಲದಿರುವುದು, ಬಡತನ, ಅನಕ್ಷರತೆ ಮುಖ್ಯ ಕಾರಣವಾಗಿದೆ.

ಬಾಲ ಕಾರ್ಮಿಕ ಪದ್ಧತಿಗೆ ಮುಖ್ಯ ಕಾರಣವೆಂದರೆ ಬಾಲ ಕಾರ್ಮಿಕರು ಅನಾರೋಗ್ಯಕರ ವಾತಾವರಣದಲ್ಲಿ ದುಡಿಯುವುದು, ಕಡಿಮೆ ವೇತನಕ್ಕೆ ಕೆಲಸ ಮಾಡುವುದು, ಹೆಚ್ಚು ಅವಧಿ ಕೆಲಸ ಮಾಡುವುದು, ವಿಶ್ರಾಂತಿ ಇಲ್ಲದಿರುವುದು, ಮತ್ತೆ ಯಾವುದೇ ಕಾರ್ಮಿಕ ಕಲ್ಯಾಣ ಸೌಲಭ್ಯ ಪಡೆಯದಿರುವುದು, ಬಾಲ ಕಾರ್ಮಿಕ ಪದ್ಧತಿಯ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ. ತಂದೆ - ತಾಯಿಯರ ನಿರಾಸಕ್ತಿಯು ಇದು ಮುಂದುವರಿಕೆಗೆ ಕಾರಣವಾಗಿದೆ.

ಇಂದಿನ ದಿನಗಳಲ್ಲಿ ವಿಕೃತ ಕಾಮುಕರ ಕೈಗೆ ಬಾಲಕಾರ್ಮಿಕರು ಸಿಕ್ಕು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮಕ್ಕಳ ಸಂಖ್ಯೆಯು ಕಡಿಮೆಯೇನಿಲ್ಲ. ಅಪಾಯಕಾರಿ ಕೆಲಸ ಮಾಡಿಸುವುದು ಅವ್ಯಾಹತವಾಗಿ ಮುಂದುವರಿಯುತ್ತಿದೆ. ಇದನ್ನು ತಡೆಯುವುದು ಸರಕಾರ ಮತ್ತು ಆರೋಗ್ಯವಂತ ಸಮಾಜದ ಕರ್ತವ್ಯವಾಗಿದೆ. ಮಕ್ಕಳನ್ನು ಅವರ ಬಾಲ್ಯದ ಹಕ್ಕಿನಿಂದ ದೂರವಿಡುವ ಹಕ್ಕು ಯಾರಿಗೂ ಇಲ್ಲ.

ಮಾಲೀಕರ ಸಂಪೂರ್ಣ ಸಹಕಾರವಿಲ್ಲದೇ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಬಾಲ ಕಾರ್ಮಿಕ ನಿಷೇಧ ಕಾಯ್ದೆ ಅಧಿಕಾರಿಗಳ ಮುಖಾಂತರ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರುವುದರಿಂದ ಈ ಪದ್ಧತಿಯನ್ನು ಪೂರ್ಣವಾಗಿ ಹತ್ತಿಕ್ಕಲು ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಅರಿವು, ಪ್ರಯತ್ನದಿಂದ ಬಾಲ ಕಾರ್ಮಿಕ ಪದ್ಧತಿಯನ್ನು ಸಮಾಜದಿಂದ ದೂರ ಮಾಡಬಹುದು.

- ಹರೀಶ್ ಸರಳಾಯ, ಮಡಿಕೇರಿ.

ಮೊ. ೯೭೩೧೮೧೦೨೫೦