ಸುಳ್ಯ, ಜೂ. ೯ : ಇಲ್ಲಿನ ಮೊಗರ್ಪಣೆಯಲ್ಲಿ ಕಳೆದ ಭಾನುವಾರ ರಾತ್ರಿ ನಡೆದ ಶೂಟ್‌ಔಟ್ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ತಾ. ೬ ರಂದು ರಾತ್ರಿ ೧೦.೩೦ ಘಂಟೆಗೆ ಕೊಡಗು ನೋಂದಣಿಯ ಸ್ಕಾರ್ಪಿಯೋ ವಾಹನದಲ್ಲಿ ಬಂದ ಆರೋಪಿಗಳ ತಂಡ ಸುಳ್ಯ ಜಯನಗರ ನಿವಾಸಿ ಮಹಮ್ಮದ್ ಶಾಹಿ (೩೯) ಎಂಬವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿ ಆಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕುಶಾಲನಗರದ ನಿವಾಸಿ ಕೆ. ಜಯನ್ (೩೮), ಮಡಿಕೇರಿಯ ವಿನೋದ್ (೩೪), ಹೆಚ್.ಎಸ್. ಮನೋಜ್ (೨೫), ಎಂಬವರನ್ನು ಬಂಧಿಸಿ ಆರೋಪಿಗಳಿಂದ

(ಮೊದಲ ಪುಟದಿಂದ) ಕೃತ್ಯಕ್ಕೆ ಬಳಸಿದ ನಾಡ ಬಂದೂಕು ಮತ್ತು ಎರಡು ಸಜೀವ ಗುಂಡುಗಳು ಹಾಗೂ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಶಾಹಿ ಅವರಿಗೆ ಪರಿಚಿತರೇ ಆಗಿದ್ದು ಹಣಕಾಸಿನ ವ್ಯವಹಾರದಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯವೇ ಈ ದುಷ್ಕೃತ್ಯಕ್ಕೆ ಕಾರಣ ಎಂದು ತಿಳಿದು ಬಂದಿದೆ. ಗುಂಡಿನ ಧಾಳಿ ನಡೆಸಿ ಶಾಹಿ ಅವರನ್ನು ಮುಗಿಸಲು ಈ ತಂಡ ಪ್ರಯತ್ನಿಸಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಜಯನ್ ೨೦೧೯ರ ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಕೊಡಗು ಜಿಲ್ಲಾ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ.

ಶಾಹಿ ಅವರನ್ನು ಮುಗಿಸಲು ನಿರ್ಧರಿಸಿದ ತಂಡ ಸೂಕ್ತ ಅವಕಾಶಕ್ಕಾಗಿ ಕಾಯುತಿತ್ತು ಅಲ್ಲದೆ ಅವರ ಚಲನವಲನಗಳನ್ನು ಗಮನಿಸುತಿತ್ತು. ಕಳೆದ ಭಾನುವಾರ ರಾತ್ರಿ ಬಂಟ್ವಾಳ -ಮೈಸೂರು ರಾಷ್ಟಿçÃಯ ಹೆದ್ದಾರಿಯಲ್ಲಿ ಸುಳ್ಯದ ಜ್ಯೋತಿ ಸರ್ಕಲ್ ಹತ್ತಿರ ವೆಂಕಟರಮಣ ಸೊಸೈಟಿ ಬಳಿಯಲ್ಲಿ ಒಂಟಿಯಾಗಿ ಕಾರು ಹತ್ತಲು ಬಂದ ಶಾಹಿ ಅವರಿಗೆ ಗುಂಡಿಕ್ಕಿ ಪರಾರಿ ಆಗಿತ್ತು. ಅದೃಷ್ಟವಶಾತ್ ಬೆನ್ನಿನ ಎಡ ಬದಿಗೆ ಗುಂಡು ತಾಗಿ ಕಾರಿನ ಬಲ ಬದಿಯ ಎರಡು ಡೋರ್‌ಗಳ ಮದ್ಯಕ್ಕೆ ತಗುಲಿದ್ದು ಮಹಮ್ಮದ್ ಶಾಹಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರತ್ಯೇಕ ತಂಡ ರಚನೆ ಮಾಡಿ ತನಿಖೆ ನಡೆಸಿ ಕೇವಲ ೩ ದಿನದಲ್ಲಿ ಪ್ರಕರಣ ಭೇದಿಸಿದ್ದಾರೆ.

ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಭಗವಾನ್ ಸೋಣಾವನೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ, ಪುತ್ತೂರು ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಡಾ. ಗಾನಾ ಪಿ. ಕುಮಾರಿ ಮತ್ತು ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಅವರ ಮಾರ್ಗದರ್ಶನದಲ್ಲಿ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಜಿ.ಆರ್. ದಿಲೀಪ್ ಮತ್ತು ತಂಡ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸುಳ್ಯ ಅಪರಾಧ ವಿಭಾಗದ ಠಾಣಾಧಿಕಾರಿ ರತ್ನಕುಮಾರ್ ಮತ್ತು ಬಿ.ಟಿ. ಸರಸ್ವತಿ, ಸಹಾಯಕ ಠಾಣಾಧಿಕಾರಿಗಳಾದ ರವೀಂದ್ರ, ಶಿವರಾಮ, ಸಿಬ್ಬಂದಿಗಳಾದ ಧನೇಶ್, ಉದಯ ಗೌಡ, ಅನಿಲ್, ಅನುಕುಮಾರ್, ಹೈದರಾಲಿ, ಸುನಿಲ್ ತಿವಾರಿ, ನಾಗರಾಜ್ ಮತ್ತು ಇತರರು ಪಾಲ್ಗೊಂಡಿದ್ದರು. - ಕೋವರ್ ಕೊಲ್ಲಿ ಇಂದ್ರೇಶ್