ಕಣಿವೆ, ಜೂ. ೧೦: ಕಾವೇರಿ ನದಿಯಲ್ಲಿ ಪ್ರತೀ ವರ್ಷದ ಮಳೆಗಾಲದಲ್ಲಿ ಸಂಭವಿಸುವ ಪ್ರವಾಹವನ್ನು ನಿಯಂತ್ರಿಸಲು ನದಿ ದಡದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಕ್ಷೇತ್ರದ ಶಾಸಕರು ಏಕೆ ಮುಂದಾಗಿಲ್ಲ ಎಂದು ಜಲಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಪ್ರಶ್ನಿಸಿದ್ದಾರೆ.

ಕುಶಾಲನಗರ ತಾಲೂಕು ತಹಶೀಲ್ದಾರ್ ಕಚೇರಿಯಿಂದ ಬಂದ ಪ್ರವಾಹದ ಸಂದರ್ಭ ಮನೆ ಖಾಲಿ ಮಾಡಿ ಎಂಬ ನೋಟೀಸ್ ಅನ್ನು ಹಿಡಿದು ‘ಶಕ್ತಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡ ಅವರು, ನದಿ ದಂಡೆಯಲ್ಲಿ ತೋಟವನ್ನು ಮಾಡಿ ಮನೆಯನ್ನು ಕಟ್ಟಿದ್ದೇ ತಪ್ಪಾ... ಎಂದು ಪ್ರಶ್ನಿಸಿದರು.ಕಳೆದ ಮೂರು ವರ್ಷಗಳಿಂದಲೂ ಸತತವಾಗಿ ಕಾವೇರಿ ನದಿಯಲ್ಲಿ ಪ್ರವಾಹ ಏರ್ಪಟ್ಟು ನದಿ ದಂಡೆಯ ನೂರಾರು ಮಂದಿ ಪ್ರತಿ ಮಳೆಗಾಲದಲ್ಲಿ ನಿರಾಶ್ರಿತರಾಗುತ್ತಿದ್ದಾರೆ. ಅಪಾರ ಆಸ್ತಿ ಪಾಸ್ತಿ ನಷ್ಟ ಮಾಡಿಕೊಳ್ಳುತ್ತಿದ್ದರೂ ಕೂಡ ಕ್ಷೇತ್ರದ ಶಾಸಕರು ಈ ಬಗ್ಗೆ

(ಮೊದಲ ಪುಟದಿಂದ) ಇನ್ನೂ ಕೂಡ ಕ್ರಮಕ್ಕೆ ಯಾಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರು. ಶಿವಮೊಗ್ಗ, ಹೊಳೆನರಸೀಪುರ, ಟಿ.ನರಸೀಪುರ ಮೊದಲಾದ ಕಡೆಗಳಲ್ಲಿ ಅಲ್ಲಿನ ಶಾಸಕರು ನದಿಯ ಪ್ರವಾಹ ತಪ್ಪಿಸಲು ನದಿಯಂಚಿನ ಪಟ್ಟಣಗಳ ಸುತ್ತ ತಡೆಗೋಡೆ ಕಟ್ಟಿದ್ದಾರೆ. ಜಿಲ್ಲೆಯ ಶಾಸಕರು ದೂರದೃಷ್ಟಿಯಲ್ಲಿ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ. ತಾಲೂಕು ತಹಶೀಲ್ದಾರರು ನದಿಯಂಚಿನ ನಿವಾಸಿಗಳಿಗೆ ನೋಟೀಸ್ ಜಾರಿ ಮಾಡಿ ಈ ಬಾರಿ ಮುಂಗಾರಿನಲ್ಲಿ ಮತ್ತೆ ಮಳೆಯ ಪ್ರಮಾಣ ಹೆಚ್ಚಾಗುವ ಬಗ್ಗೆ ಹವಾಮಾನ ಇಲಾಖೆ ವರದಿ ನೀಡಿರುವುದರಿಂದ ನದಿ ದಂಡೆಯ ನಿವಾಸಿಗಳು ಸೂಕ್ತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು ಅಥವಾ ತಾಲೂಕು ಆಡಳಿತ ಗುರುತಿಸುವ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯಬೇಕು. ಇಲ್ಲದಿದ್ದಲ್ಲಿ ಮುಂದಾಗುವ ನಷ್ಟಗಳಿಗೆ ಜಿಲ್ಲಾಡಳಿತ ಹೊಣೆಯಲ್ಲ ಎಂಬ ಮಾಹಿತಿಯನ್ನು ರವಾನಿಸಿರುವುದು ನಿವಾಸಿಗಳಲ್ಲಿ ಮತ್ತದೇ ಆತಂಕವನ್ನು ಉಂಟು ಮಾಡಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.