ಶನಿವಾರಸಂತೆ, ಜೂ. ೯: ಸಮೀಪದ ಹಂಡ್ಲಿ ಗ್ರಾಮದಿಂದ ನಾಕಲಗೋಡು ಗ್ರಾಮಕ್ಕೆ ಹೋಗುವ ೧ ಕಿ.ಮೀ. ಮುಖ್ಯರಸ್ತೆ ಜಲ್ಲಿ ಕಿತ್ತು ಹೋಗಿ ಪಾದಚಾರಿಗಳ ಹಾಗೂ ವಾಹನಗಳ ಓಡಾಟ ತ್ರಾಸದಾಯಕವಾಗಿದ್ದು, ಮಣ್ಣಿನ ರಸ್ತೆಯಂತಾಗಿದೆ. ನಿತ್ಯ ತಿರುಗಾಡುವ ಗ್ರಾಮಸ್ಥರು, ಕೃಷಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಾಂಬರು ಕಾಣದ ಜಲ್ಲಿ ರಸ್ತೆ ಹಲವಾರು ವರ್ಷಗಳಿಂದ ದುರಸ್ಥಿ ಭಾಗ್ಯ ಕಾಣಲೇ ಇಲ್ಲ. ಜಲ್ಲಿ ಕಿತ್ತು ಹೋಗಿದ್ದು, ಮಣ್ಣಿನ ರಸ್ತೆಯಂತಾಗಿ ಮಳೆಗಾಲದಲ್ಲಿ ಕೆಸರುಮಯವಾಗಿ ತಿರುಗಾಡುವ ಮಂದಿ, ವಾಹನಗಳು ಬಿದ್ದೆದ್ದು ಹೋಗುವ ಅಪಾಯ ತಂದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕರಾಗಲೀ, ಜನಪ್ರತಿನಿಧಿಗಳಾಗಲಿ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಬೆಳ್ಳಾರಳ್ಳಿ ಗ್ರಾಮದ ಕೃಷಿಕರಾದ ಬಿ.ಎಸ್. ಪ್ರತಾಪ್, ಪ್ರದೀಪ್, ಸಂತೋಷ್ ಹಾಗೂ ನಾಕಲಗೋಡು ಗ್ರಾಮದ ಸುದೀಪ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಿತ್ಯ ಇದೇ ರಸ್ತೆಗಾಗಿ ನಾಕಲಗೋಡು ಗ್ರಾಮದಿಂದ ಹಂಡ್ಲಿಗೆ ಹೋಗುವ ಶಾಲಾ - ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು, ಹಾಲು, ಇತ್ಯಾದಿ ಅಗತ್ಯ ವಸ್ತುಗಳ ಖರೀದಿಗಾಗಿ ಗ್ರಾಮಸ್ಥರು, ತೋಟ - ಗದ್ದೆಗಳಿಗೆ ತೆರಳುವ ಕೃಷಿಕರು ಸರ್ಕಸ್ ಮಾಡುತ್ತಲೇ ಭಯದಿಂದ ಹೆಜ್ಜೆ ಹಾಕುವಂತಾಗಿದೆ. ಕಳೆದ ವಾರ ಸುರಿದ ಮಳೆಗೆ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ವಾಹನಗಳ ಸಂಚಾರ ತ್ರಾಸದಾಯಕವಾಗಿರುವ ಕಾರಣ ಮಗುಚಿಕೊಳ್ಳುವ ಭೀತಿಯಿಂದ ಮಾಲೀಕರು, ಚಾಲಕರು ರಸ್ತೆ ಆರಂಭದಲ್ಲೇ ವಾಹನಗಳನ್ನು ನಿಲ್ಲಿಸಿ ನಡೆದೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹದಗೆಟ್ಟ ರಸ್ತೆಯಿಂದಾಗಿ ಕೃಷಿ ಚಟುವಟಿಕೆ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಂಡ್ಲಿ- ನಾಕಲಗೋಡು ರಸ್ತೆ ದುರಸ್ಥಿ ಬಗ್ಗೆ ಚುನಾವಣೆ ಸಮಯದಲ್ಲಿ ಓಟು ಕೇಳಲು ಬರುವ ಜನಪ್ರತಿನಿಧಿಗಳು ಸ್ಪಂದಿಸದೆ ಮೌನವ್ರತ ಹಿಡಿದಿದ್ದಾರೆ. ಚುನಾವಣೆ ಘೋಷಣೆ ಬಳಿಕ ಎಚ್ಚರವಾಗಬಹುದು. ಶಾಸಕ ಅಪ್ಪಚ್ಚು ರಂಜನ್ ಅವರಾದರೂ ಈ ರಸ್ತೆಯನ್ನು ಜಲ್ಲಿ ರಸ್ತೆಯನ್ನಾಗಿಯಾದರೂ ದುರಸ್ಥಿಪಡಿಸಿ ಕೊಡಲಿ ಎಂದು ಬೆಳ್ಳಾರಳ್ಳಿ ಗ್ರಾಮದ ಬೆಳೆಗಾರ ಹಾಗೂ ವಾಣಿಜ್ಯೋದ್ಯಮಿ ಬಿ.ಎಸ್. ಪ್ರತಾಪ್ ಆಗ್ರಹಿಸಿದ್ದಾರೆ.