ಸಿದ್ದಾಪುರ, ಜೂ. ೯: ವೃದ್ಧ ದಂಪತಿಗಳನ್ನು ಮನೆ ಒಳಗೆ ಕೂಡಿ ಹಾಕಿ ಮನೆಯ ಒಳಗಿದ್ದ ಚಿನ್ನಾಭರಣ ಹಾಗೂ ನಗದನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಮಾಲ್ದಾರೆ ಸಮೀಪದ ಬಾಡಗ ಬಾಣಂಗಾಲ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಮಾಲ್ದಾರೆ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ನಿವಾಸಿಗಳಾದ ತಂಗಪ್ಪನ್ ಹಾಗೂ ಜಾನಕಿ ದಂಪತಿಗಳು ವೃದ್ಧರಾಗಿದ್ದು, ಇಬ್ಬರೇ ಮನೆಯಲ್ಲಿ ವಾಸವಾಗಿದ್ದಾರೆ. ಬುಧವಾರ ರಾತ್ರಿ ಅಂದಾಜು ೮ ರಿಂದ ೮.೩೦ರ ಸಮಯದಲ್ಲಿ ತಂಗಪ್ಪನ್ ದಂಪತಿ ಮನೆಯ ಒಳಗೆ ಊಟ ಮಾಡುವ ಸಂದರ್ಭದಲ್ಲಿ ಮೂವರು ಅಪರಿಚಿತ ಮುಸುಕುಧಾರಿಗಳು ದಿಢೀರನೆ ಹಿಂಬಾಗಿಲಿನ ಮೂಲಕ ನುಗ್ಗಿದ್ದಾರೆ. ನಂತರ ಇಬ್ಬರು ಮುಸುಕುಧಾರಿಗಳು ತಂಗಪ್ಪನ್ ಹಾಗೂ ಜಾನಕಿಯನ್ನು ಬಲವಾಗಿ ಹಿಡಿದು ಬಾಯಿಗೆ ಬಟ್ಟೆ ತುರುಕಿ ಕತ್ತಿಗಳನ್ನು ತೋರಿಸಿ ಮನೆಯ ಒಳಗಿನ ಕೋಣೆಯಲ್ಲಿ ಕೂಡಿ ಹಾಕಿ ಚಿಲಕ ಹಾಕಿದ್ದಾರೆ.

ಮನೆಯ ಬೀಗದ ಕೀ ನೀಡುವಂತೆ ಬೆದರಿಸಿದ್ದಾರೆ. ನಂತರ ಅಲ್ಮಾರಗಳ ಕೀಗಳನ್ನು ಪಡೆದು ನಗದು ರೂ. ೨ ಲಕ್ಷ ಹಾಗೂ ಬೆಲೆ ಬಾಳುವ, ಜಾನಕಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ತಾಳಿ ಸರವನ್ನು ಕಿತ್ತುಕೊಂಡರು. ಕುತ್ತಿಗೆಯಿಂದ ಎಳೆಯುವ ಸಂದರ್ಭದಲ್ಲಿ ತಾಳಿ ಮಾತ್ರ ದೊರೆತ್ತಿದ್ದು, ತಡೆಯಲು ಹೋದ ಮಹಿಳೆಗೆ ಸಣ್ಣ ಗಾಯವಾಗಿರುತ್ತದೆ.

ದರೋಡೆಗೆ ಒಳಗಾದ ವೃದ್ಧ ದಂಪತಿ ದರೋಡೆಕೋರರು ಹೊರ ಹೋಗುತ್ತಿದ್ದಂತೆ ಕಿರುಚಾಡಿದಾಗ ನೆರೆ ಮನೆಯ ನಿವಾಸಿ ಮನೆಯ ಬಳಿ ಬಂದಾಗ ದರೋಡೆಕೋರರು ಪರಾರಿಯಾಗಿದ್ದಾರೆ. ನಂತರ ಸಿದ್ದಾಪುರ ಪೊಲೀಸ್ ಠಾಣೆಗೆ ಪುಕಾರು ನೀಡಿದ್ದಾರೆ.

ಒಂದು ಎಕರೆ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಮಾಡಿಕೊಂಡಿರುವ ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರು ಹೊರ ಊರಿನಲ್ಲಿ ವಾಸಮಾಡಿಕೊಂಡಿದ್ದಾರೆ. ದರೋಡೆ ನಡೆದ ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ

(ಮೊದಲ ಪುಟದಿಂದ) ಮೋಹನ್‌ರಾಜ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಚಿಕಿತ್ಸೆಗಿಟ್ಟ ಹಣ ದರೋಡೆ

ವೃದ್ಧ ದಂಪತಿ ಮನೆಗೆ ನುಗ್ಗಿದ ದರೋಡೆಕೋರರ ಪೈಕಿ ಓರ್ವ ಜಾನಕಿ ಹೃದಯ ರೋಗದ ಚಿಕಿತ್ಸೆಗೆ ಇಟ್ಟಿದ್ದ ರೂ. ೫೦ ಸಾವಿರವನ್ನು ಕೂಡ ಬಲವಂತವಾಗಿ ಕಿತ್ತುಕೊಂಡಿದ್ದಾನೆ. ಅಲ್ಲದೆ ತಂಗಪ್ಪನ್ ಇಟ್ಟಿದ್ದ ರೂ. ೧.೫೦ ಲಕ್ಷವನ್ನು ಕೂಡ ಕಳ್ಳತನ ಮಾಡಿದ್ದಾರೆ. ದರೋಡೆಕೋರರು ಹೊರ ಹೋದ ನಂತರ ದಂಪತಿ ನೆರೆ ಮನೆಯ ನಿವಾಸಿ ಬಿದ್ದಪ್ಪ ಎಂಬವರನ್ನು ಕೂಗಿ ಕರೆದಾಗ ಬಿದ್ದಪ್ಪನವರ ಪತ್ನಿ ಹಾಗೂ ಕಾರ್ಮಿಕರು ತಕ್ಷಣವೇ ಮನೆಯ ಒಳಕ್ಕೆ ಬಂದು ವಿಚಾರಿಸಿ ಚಿಲಕ ಹಾಕಿದ ಬಾಗಿಲನ್ನು ತೆರೆದರು. ವಿದ್ಯುತ್ ಕಡಿತಗೊಳಿಸಿ ಒಳ ನುಗ್ಗಿ ದರೋಡೆ ಮಾಡಿದರು ಎಂದು ವೃದ್ಧ ದಂಪತಿ ಹೇಳಿದ್ದಾರೆ.

ಮಾಲ್ದಾರೆ ಬಾಡಗ ಗ್ರಾಮದಲ್ಲಿ ವೃದ್ಧ ದಂಪತಿಗೆ ಕೊಲೆ ಬೆದರಿಕೆ ಒಡ್ಡಿ ಮಾರಕ ಅಸ್ತçಗಳನ್ನು ಹಿಡಿದು ದರೋಡೆ ಮಾಡಿರುವ ವಿಚಾರ ತಿಳಿದು ಗ್ರಾಮದಲ್ಲಿ ಭಯದ ವಾತಾವರಣ ಕಂಡು ಬಂದಿದೆ. ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಬೇಕೆಂದು ಗ್ರಾಮಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ. ದರೋಡೆ ನಡೆದ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ತನಿಖೆ ನಡೆಸಲಾಯಿತು. -ವರದಿ: ವಾಸು ಎ.ಎನ್.