ಕುಶಾಲನಗರ, ಜೂ.೧೦: ಮಾರುತಿ ಓಮಿನಿ ಕಾರಿನಲ್ಲಿ ಬೀಟೆ ಮರದ ನಾಟಗಳನ್ನು ಸಾಗಿಸುತ್ತಿದ್ದ ಸಂದರ್ಭ ಕುಶಾಲನಗರ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಮತ್ತು ಸೋಮವಾರಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ಅರಣ್ಯ ವಲಯಾಧಿಕಾರಿ ಶಿವರಾಂ ನೇತೃತ್ವದಲ್ಲಿ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಕಾರ್ಯಾಚರಣೆ ನಡೆದಿದೆ. ಗುರುವಾರ ತಡರಾತ್ರಿ ಘಟನೆ ನಡೆದಿದ್ದು, ನಾಪೋಕ್ಲು ಕಡೆಯಿಂದ ಕುಶಾಲನಗರ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ಓಮಿನಿ ಕಾರಿನಲ್ಲಿ (ಕೆ.ಎ. ೦೨ ಪಿ. ೭೧೧೮) ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಐದು ಬೀಟೆ ನಾಟಗಳು ಪತ್ತೆಯಾಗಿವೆ. ವಾಹನ ಚಾಲನೆ ಮಾಡುತ್ತಿದ್ದ ಅಪ್ಪಣ್ಣ ಎಂಬಾತನನ್ನು ಬಂಧಿಸಿ ವಾಹನ ಮತ್ತು ಬೀಟೆ ನಾಟಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ನಾಪೋಕ್ಲು ತಾಲೂಕಿನ ನಿವಾಸಿಯಾಗಿದ್ದು ಕಾರ್ಯಾಚರಣೆ ಸಂದರ್ಭ ಪರಾರಿಯಾಗಲು ಯತ್ನಿಸಿದಾಗ ಸಿಬ್ಬಂದಿಗಳು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅರಣ್ಯ ವಲಯ ಅಧಿಕಾರಿ ಕೆ.ವಿ ಶಿವರಾಂ ತಿಳಿಸಿದ್ದಾರೆ.
ಅಂದಾಜು ೨.೫ ಲಕ್ಷ ಮೌಲ್ಯದ ವಾಹನ ಮತ್ತು ಬೀಟೆ ನಾಟಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಕುಶಾಲನಗರ ಅರಣ್ಯ ವಲಯಾಧಿಕಾರಿ ಕೆ.ವಿ. ಶಿವರಾಂ, ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಎನ್. ದೇವಯ್ಯ, ಅನಿಲ್ ಡಿಸೋಜ, ಕೆ.ಎಸ್. ಸುಬ್ರಾಯ, ಕೆ.ಪಿ. ರಂಜನ್, ಕೆ.ಐ. ವಿಲಾಸ್, ಸಿಬ್ಬಂದಿಗಳಾದ ಮಂಜೇಗೌಡ, ಸಿದ್ದರಾಮ, ನಾಟಿಕಾರ್, ಆರ್ಆರ್ಟಿ ಸಿಬ್ಬಂದಿ ಧರ್ಮ ಪಾಲ್ಗೊಂಡಿದ್ದರು.