ಸಿದ್ದಾಪುರ, ಜೂ. ೯: ಸಿದ್ದಾಪುರ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಒದಗಿಸಿ ಕೊಡಬೇಕೆಂದು ಒತ್ತಾಯಿಸಿ ಸಿಪಿಐ (ಎಂ) ಪಕ್ಷದ ವತಿಯಿಂದ ತಾ. ೧೩ ರಂದು ಸಿದ್ದಾಪುರ ಗ್ರಾ.ಪಂ ಕಚೇರಿ ಎದುರು ಪ್ರತಿಭಟನೆ ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಮುಖಂಡ ಎನ್.ಡಿ. ಕುಟ್ಟಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಕುರಿತು ಮಾಹಿತಿ ನೀಡಿದ ಅವರು ಸಿಪಿಐ (ಎಂ) ಪಕ್ಷದ ವತಿಯಿಂದ ನಿವೇಶನ ರಹಿತರಿಗೆ ನಿವೇಶನ ಒದಗಿಸಿಕೊಡಬೇಕೆಂದು ಈ ಹಿಂದೆ ಗ್ರಾ.ಪಂ ಎದುರು ಪ್ರತಿಭಟನೆಯನ್ನು ನಡೆಸಲಾಗಿತ್ತು. ಅಲ್ಲದೇ ಗ್ರಾ.ಪಂ.ಗೆ ಮನವಿ ಪತ್ರ ನೀಡಲಾಗಿತ್ತು. ಆದರೆ ಗ್ರಾ.ಪಂ. ಆಡಳಿತ ಮಂಡಳಿ ಈವರೆಗೂ ಈ ಬಗ್ಗೆ ಚರ್ಚಿಸದೇ ನಿರ್ಲಕ್ಷö್ಯ ವಹಿಸುತ್ತಿದೆ ಎಂದು ಆರೋಪಿಸಿರುವ ಅವರು, ಒತ್ತುವರಿಯಾಗಿರುವ ಭೂಮಿಯನ್ನು ಜಿಲ್ಲಾಡಳಿತ ವಶಪಡಿಸಿಕೊಂಡು ನಿವೇಶನ ರಹಿತರಿಗೆ ಸೂರು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು. ಸಿಪಿಐ (ಎಂ) ಮುಖಂಡ ಹೆಚ್.ಬಿ ರಮೇಶ್ ಮಾತನಾಡಿ, ತಾ. ೧೩ ರಂದು ನಿವೇಶನ ರಹಿತರು ಹಾಗೂ ನದಿ ತೀರದ ಸಂತ್ರಸ್ತ ಕುಟುಂಬಗಳು ಸೇರಿ ಗ್ರಾ.ಪಂ. ಕಚೇರಿ ಎದುರು ಬೆಳಿಗ್ಗೆ ೧೧ ಗಂಟೆಗೆ ಪ್ರತಿಭಟನೆಯನ್ನು ನಡೆಸಲಾಗುವುದು. ಈ ಸಂದರ್ಭ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ಮುಂದುವರೆಸುವುದಾಗಿ ರಮೇಶ್ ತಿಳಿಸಿದರು.