ಮಡಿಕೇರಿ, ಜೂ. ೧೦ : ನಗರಸಭಾ ಪೌರಾಯುಕ್ತ ಎಸ್.ವಿ. ರಾಮದಾಸ್ ಅವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನೀರಾ ಮೈನಾ, ಕೆ.ಎಂ.ಎಸ್. ಹಂತದ ಅಧಿಕಾರಿಯನ್ನು ಪೌರಾಯುಕ್ತರನ್ನಾಗಿ ನಿಯೋಜಿಸಲು ಕ್ರಮವಹಿಸಬೇಕೆಂದು ಆಗ್ರಹಿಸಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯಲ್ಲಿ ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿಯಮ ಉಲ್ಲಂಘಿಸಿ ನಿರ್ಮಾಣವಾದ ಕಟ್ಟಡಗಳ ವಿರುದ್ಧ ಕ್ರಮಕೈಗೊಳ್ಳಬೇಕಾದ ಅಧಿಕಾರಿ ಸುಮ್ಮನಿರಲು ಕಾರಣವೇನೆಂದು ಪ್ರಶ್ನಿಸಿದರು.
ಈ ಹಿಂದೆ ಮಡಿಕೇರಿ ನಾಗರೀಕರು ಪೌರಾಡಳಿತ ಸಚಿವರಿಗೆ ಪತ್ರ ಬರೆದು ಪೌರಾಯುಕ್ತರ ಬದಲಾವಣೆಗೆ ಒತ್ತಾಯಿಸಿದ್ದರು. ಆದರೆ, ಇಲ್ಲಿನ ಶಾಸಕರು ಇವರನ್ನು ಉಳಿಸಿಕೊಳ್ಳುವಂತೆ ಪತ್ರ ಬರೆದರು. ಅದರಲ್ಲಿ ನಾಗರೀಕರ ಸಮಸ್ಯೆ ಪರಿಹಾರ ಕಾರಣಕ್ಕಾಗಿ ಅವರನ್ನು ಬದಲಾವಣೆ ಮಾಡಬಾರದು ಎಂದು ಉಲ್ಲೇಖಿಸಲಾಗಿತ್ತು ಇದು ಯಾಕಾಗಿ? ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಭು ರೈ, ಪ್ರಧಾನ ಕಾರ್ಯದರ್ಶಿ ದೋಳ್ಪಾಡಿ ಯಶ್, ಸೈನಿಕ ಪ್ರಕೋಷ್ಠ ಅಧ್ಯಕ್ಷ ಗಣೇಶ್, ಸಂಘಟನಾ ಕಾರ್ಯದರ್ಶಿ ರವಿ ಗೌಡ, ಕಾರ್ಯದರ್ಶಿ ವಸಂತ್ ಹಾಜರಿದ್ದರು.